ಸ್ಮಿತ್ ಭುಜಕ್ಕೆ ಎರಗಿದ ರಬಾಡಗೆ 2 ಟೆಸ್ಟ್ ಗಳಿಗೆ ನಿಷೇಧದ ಭೀತಿ !

Update: 2018-03-10 18:00 GMT

ಜೋಹಾನ್ಸ್‌ಬರ್ಗ್, ಮಾ.10: ದಕ್ಷಿಣ ಆಫ್ರಿಕದ ವೇಗಿ ಕಾಗಿಸೊ ರಬಾಡ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉಳಿದ ಎರಡು ಟೆಸ್ಟ್ ಗಳಿಗೆ ನಿಷೇಧದ ಭೀತಿ ಎದುರಿಸುತ್ತಿದ್ದಾರೆ.

  ಪೋರ್ಟ್ ಎಲಿಜಬೆತ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನ ರಬಾಡ ಅವರು ಆಸ್ಟ್ರೇಲಿಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಔಟಾಗಿ ಪೆವಿಲಿಯನ್‌ಗೆ ವಾಪಸಾಗುತ್ತಿದ್ದಾಗ ಅವರ ಭುಜದ ಮೇಲೆ ಎರಗಿ ವಿಕೆಟ್ ಪಡೆದ ಸಂಭ್ರಮವನ್ನು ವ್ಯಕ್ತಪಡಿಸಿದ್ದರು.

  ರಬಾಡ ವರ್ತನೆಯು ಇದೀಗ ಹೊಸ ವಿವಾದವನ್ನುಂಟು ಮಾಡಿದೆ. ರಬಾಡ ಅವರು ಐಸಿಸಿ ನೀತಿ ಸಂಹಿತೆ ‘ಲೆವೆಲ್ ಟು’ ವನ್ನು ಉಲ್ಲಂಘಿಸಿದ್ದಾರೆ. ಇದಕ್ಕಾಗಿ ಅವರು ಮೂರು ಡಿಮೆರಿಟ್ ಪಾಯಿಂಟ್ ಪಡೆಯಲಿದ್ದಾರೆ. ಈಗಾಗಲೇ ಐದು ಡಿಮೆರಿಟ್ ಪಾಯಿಂಟ್ ಹೊಂದಿರುವ ರಬಾಡ ಖಾತೆಗೆ ಒಟ್ಟು 8 ಡಿಮೆರಿಟ್ ಪಾಯಿಂಟ್ ಸೇರಲಿದೆ. ಈ ಕಾರಣಕ್ಕಾಗಿ ಅವರು ಎರಡು ಟೆಸ್ಟ್‌ಗಳಿಂದ ಅಮಾನತುಗೊಳ್ಳುವ ಭೀತಿಯಲ್ಲಿದ್ದಾರೆ.

22ರ ಹರೆಯದ ರಬಾಡ ಅವರು ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿ ಶನಿವಾರ ರಾತ್ರಿ ಮ್ಯಾಚ್ ರೆಫರಿ ಜೆಫ್ ಕ್ರೋವ್ ಮುಂದೆ ಹಾಜರಾಗಲಿದ್ದಾರೆ.

ಶುಕ್ರವಾರ ನಡೆದಿರುವ ಘಟನೆಯನ್ನು ಪರಿಶೀಲನೆ ಮಾಡಿರುವ ಮ್ಯಾಚ್ ರೆಫರಿ ಜೆಫ್ ಕ್ರೋವ್ ಅವರು ರಬಾಡ ಅವರು ಐಸಿಸಿ ಆಟಗಾರರ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದನ್ನು ಈಗಾಗಲೇ ಖಾತ್ರಿಪಡಿಸಿದ್ದಾರೆ.

ರಬಾಡ ಅವರು 96ಕ್ಕೆ 5 ವಿಕೆಟ್ ಪಡೆದು ಆಸ್ಟ್ರೇಲಿಯವನ್ನು ಮೊದಲ ಇನಿಂಗ್ಸ್‌ನಲ್ಲಿ 71.3 ಓವರ್‌ಗಳಲ್ಲಿ 243ಕ್ಕೆ ನಿಯಂತ್ರಿಸುವಲ್ಲಿ ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News