×
Ad

ಗ್ಲೌಸ್ ಧರಿಸಿದ ತಪ್ಪಿಗೆ 5 ಪೆನಾಲ್ಟಿ ರನ್ ನೀಡಿದ ರೆನ್‌ಶಾ

Update: 2018-03-10 23:36 IST

ಮೆಲ್ಬೋರ್ನ್, ಮಾ.10: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ದಾಂಡಿಗ ಮ್ಯಾಟ್ ರೆನ್‌ಶಾ ಅವರು ಫೀಲ್ಡಿಂಗ್ ವೇಳೆ ವಿಕೆಟ್ ಕೀಪರ್ ಧರಿಸುವ ಗ್ಲೌಸ್ ಧರಿಸಿದ ತಪ್ಪಿಗಾಗಿ ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್ ಬಿಟ್ಟುಕೊಟ್ಟ ಅಪರೂಪದ ಘಟನೆ ನಡೆದಿದೆ. ಶೇಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಕ್ವೀನ್ಸ್‌ಲ್ಯಾಂಡ್ ತಂಡದ ಪರ ಆಡುತ್ತಿರುವ ರೆನ್‌ಶಾ ಅವರು ವೆಸ್ಟರ್ನ್ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸಲು ತನ್ನ ತಂಡದ ವಿಕೆಟ್ ಕೀಪರ್ ಜಿಮ್ಮಿ ಪೀರ್ಸನ್ ಗ್ಲೌಸ್ ಪಡೆದರು. ಚೆಂಡನ್ನು ಎಸೆಯಲು ಗ್ಲೌಸ್ ಬಳಸಿದ ರೆನ್‌ಶಾ ಬಳಿಕ ಜಿಮ್ಮಿ ಪೀರ್ಸನ್‌ಗೆ ಗ್ಲೌಸ್ ವಾಪಸ್ ನೀಡಿದರು. ವಿಕೆಟ್ ಕೀಪರ್ ಜಿಮ್ಮಿ ಪೀರ್ಸನ್ ಅವರು ಗ್ಲೌಸ್‌ನ್ನು ಕ್ರೀಡಾಂಗಣದಲ್ಲಿ ಕಳಚಿಟ್ಟಿದ್ದರು. ಫಸ್ಟ್ ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ರೆನ್‌ಶಾ ಗ್ಲೌಸ್‌ನ್ನು ತೆಗೆದುಕೊಂಡು ವಿಕೆಟ್ ಕೀಪರ್ ಎಸೆದ ಚೆಂಡನ್ನು ಹಿಡಿದರು ಎನ್ನಲಾಗಿದೆ.

ರೆನ್‌ಶಾ ಗ್ಲೌಸ್‌ನ್ನು ಬಳಸಿರುವುದನ್ನು ಗಮನಿಸಿದ ಫೀಲ್ಡ್ ಅಂಪೈರ್, ವೆಸ್ಟರ್ನ್ ಆಸ್ಟ್ರೇಲಿಯ ತಂಡಕ್ಕೆ 5 ಪೆನಾಲ್ಟಿ ರನ್ ನೀಡಿದರು. ಕ್ರಿಕೆಟ್ ನಿಯಮ 27.1ರಂತೆ ತಂಡವೊಂದು ಫೀಲ್ಡಿಂಗ್ ನಡೆಸುತ್ತಿದ್ದಾಗ ಆ ತಂಡದ ವಿಕೆಟ್ ಕೀಪರ್‌ಗೆ ಮಾತ್ರ ಗ್ಲೌಸ್ ಧರಿಸಲು ಅವಕಾಶ ಇದೆ. ಈ ಕಾರಣದಿಂದಾಗಿ ರೆನ್‌ಶಾ ಕ್ರಿಕೆಟ್ ನಿಯಮವನ್ನು ಉಲ್ಲಂಘಿಸಿದರು ಎನ್ನಲಾಗಿದೆ. ರೆನ್‌ಶಾ ಮಾಡಿದ ತಪ್ಪಿಗೆ ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್ ಬಿಟ್ಟು ಕೊಟ್ಟರೂ ಅವರ ತಂಡಕ್ಕೆ ಏನೂ ಆಗಲಿಲ್ಲ. ವೆಸ್ಟರ್ನ್ ಆಸ್ಟ್ರೇಲಿಯ ವಿರುದ್ಧ ರೆನ್‌ಶಾ ತಂಡ ಕ್ವೀನ್ಸ್‌ಲ್ಯಾಂಡ್ 211 ರನ್‌ಗಳ ಭರ್ಜರಿ ಜಯ ಗಳಿಸಿತು. ರೆನ್‌ಶಾ ಆಸ್ಟ್ರೇಲಿಯ ತಂಡದ ಪರ 10 ಟೆಸ್ಟ್‌ಗಳಲ್ಲಿ ಆಡಿದ್ದಾರೆ. ರೆನ್‌ಶಾ ಫಾರ್ಮ್ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಆ್ಯಶಸ್ ಸರಣಿ ಮತ್ತು ಇದೀಗ ದಕ್ಷಿಣ ಆಫ್ರಿಕದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News