ಹಾಲೆಪ್, ಪ್ಲಿಸ್ಕೋವಾ ಗೆಲುವಿನಾರಂಭ

Update: 2018-03-10 18:09 GMT

ಇಂಡಿಯನ್ ವೆಲ್ಸ್, ಮಾ.10: ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಹಾಗೂ ಐದನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ.

ಆದರೆ, ವಿಂಬಲ್ಡನ್ ಚಾಂಪಿಯನ್ ಗಾರ್ಬೈನ್ ಮುಗುರುಝ ಮೊದಲ ಸುತ್ತಿನಲ್ಲಿ ಮುಗ್ಗರಿಸಿ ಅಚ್ಚರಿ ಮೂಡಿಸಿದ್ದಾರೆ.

ಮುಗುರುಝ ವಿಶ್ವದ ನಂ.100ನೇ ಆಟಗಾರ್ತಿ ಸಚಿಯಾ ವಿಕೆರಿ ವಿರುದ್ಧ 6-2, 5-7, 1-6 ಸೆಟ್‌ಗಳಿಂದ ಆಘಾತ ಕಾರಿ ಸೋಲುಂಡಿದ್ದಾರೆ.

ಟೂರ್ನಿಯಲ್ಲಿ 3ನೇ ಶ್ರೇಯಾಂಕ ಪಡೆದಿದ್ದ ಮುಗುರುಝ 2017ರಲ್ಲಿ ವರ್ಷದ ಡಬ್ಲುಟಿಎ ಆಟಗಾರ್ತಿ ಪ್ರಶಸ್ತಿ ಪಡೆದಿದ್ದರು. ವಿಂಬಲ್ಡನ್ ಹಾಗೂ ಸಿನ್ಸಿನಾಟಿ ಟೂರ್ನಿಯಲ್ಲಿ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದಾರೆ. 24ರ ಹರೆಯದ ಮುಗುರುಝ ಸೆಪ್ಟಂಬರ್‌ನಲ್ಲಿ ವಿಶ್ವದ ನಂ.1 ಸ್ಥಾನ ಪಡೆದಿದ್ದರು. ಇಂಡಿಯನ್ ವೆಲ್ಸ್ ಗೆ ಮೊದಲು ಮೂರನೇ ರ್ಯಾಂಕಿಗೆ ತಲುಪಿದ್ದರು.

ಮುಗುರುಝ 2016ರಲ್ಲಿ ವಿಂಬಲ್ಡನ್‌ನಲ್ಲಿ ಜಾನಾ ಸೆಪೆಲೋವಾ ವಿರುದ್ಧ ಸೋತ ಬಳಿಕ ಮೊದಲ ಬಾರಿ 100ಕ್ಕಿಂತ ಹೆಚ್ಚಿನ ರ್ಯಾಂಕಿನ ಆಟಗಾರ್ತಿಯ ವಿರುದ್ಧ ಸೋತಿದ್ದಾರೆ.

ರೊಮಾನಿಯ ಆಟಗಾರ್ತಿ ಹಾಲೆಪ್ ಅವರು ಕರೊಲಿನಾ ಸಹೋದರಿ ಕ್ರಿಸ್ಟಿನಾ ಪ್ಲಿಸ್ಕೋವಾರನ್ನು 6-4, 6-4 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

ಹಾಲೆಪ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಕರೊಲಿನ್ ಡೊಲ್‌ಹೈಡ್‌ರನ್ನು ಎದುರಿಸಲಿದ್ದಾರೆ. ಡೊಲ್‌ಹೈಡ್ ಸ್ಲೋವಾಕಿಯದ ಡೊಮಿನಿಕಾ ಸಿಬುಲ್ಕೋವಾರನ್ನು 5-7, 6-3, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ.

ಹಾಲೆಪ್ ಹಾಗೂ ಕರೊಲಿನ್ ವೋಝ್ನಿಯಾಕಿ ಈ ವರ್ಷ ನಂ.1 ಸ್ಥಾನ ಪಡೆದಿದ್ದರು. ಡೆನ್ಮಾರ್ಕ್‌ನ ವೋಝ್ನಿಯಾಕಿ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಹಾಲೆಪ್‌ರನ್ನು ಮೂರು ಸೆಟ್‌ಗಳಿಂದ ಸೋಲಿಸಿ ನಂ.1 ಸ್ಥಾನ ಪಡೆದಿದ್ದರು. ಆದರೆ, ಹಾಲೆಪ್ ಇಂಡಿಯನ್ ವೆಲ್ಸ್‌ಗಿಂತ ಮೊದಲು ನಂ.1 ಸ್ಥಾನ ವಶಪಡಿಸಿಕೊಂಡಿದ್ದಾರೆ. ಪ್ಲಿಸ್ಕೋವಾ ಅವರು ಐರಿನಾ ಕಮೆಲಿಯಾ ಬೆಗುವರನ್ನು 7-6(7/4),6-1 ಸೆಟ್‌ಗಳಿಂದ ಸೋಲಿಸಿದ್ದಾರೆ.

►ಸತತ 14ನೇ ಜಯ: ಯುಲಿಯಾ ಪುಟಿಂಟ್‌ಸೇವಾರನ್ನು 6-7(4/7), 7-6(7/3),6-4 ಸೆಟ್‌ಗಳಿಂದ ಮಣಿಸಿದ 9ನೇ ಶ್ರೇಯಾಂಕದ ಪೆಟ್ರಾ ಕ್ವಿಟೋವಾ ಸತತ 14ನೇ ಗೆಲುವು ಸಾಧಿಸಿದರು. ತನ್ನದೇ ಸತತ ಗೆಲುವಿನ ದಾಖಲೆಯನ್ನು ಸರಿಗಟ್ಟಿದರು.

ಸ್ವಿಸ್‌ನ ಬೆಲಿಂಡ ಬೆನ್ಸಿಕ್‌ರನ್ನು 6-4, 3-6, 6-1 ಸೆಟ್‌ಗಳಿಂದ ಮಣಿಸಿದ ಉದಯೋನ್ಮುಖ ಆಟಗಾರ್ತಿ ಜೆಲೆನಾ ಒಸ್ಟಾಪೆಂಕೊ ಮೂರನೇ ಸುತ್ತಿಗೆ ತಲುಪಿದ್ದಾರೆ. ಫ್ರೆಂಚ್ ಓಪನ್ ಚಾಂಪಿಯನ್ ಒಸ್ಟಾಪೆಂಕೊ ಮುಂದಿನ ಸುತ್ತಿನಲ್ಲಿ ಕ್ರೊಯೇಷಿಯದ ಪೆಟ್ರಾ ಮಾರ್ಟಿಕ್‌ರನ್ನು ಎದುರಿಸಲಿದ್ದಾರೆ. ಮಾರ್ಟಿಕ್ ಝೆಕ್‌ನ ಬಾರ್ಬೊರ ಸ್ಟ್ರೈಕೋವಾ7-5, 6-4 ಸೆಟ್‌ಗಳಿಂದ ಮಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News