ಶೇಷ ಭಾರತ ತಂಡಕ್ಕೆ ಜಡೇಜ ಬದಲಿಗೆ ಆರ್. ಅಶ್ವಿನ್
ಹೊಸದಿಲ್ಲಿ, ಮಾ.10: ಗಾಯಗೊಂಡಿರುವ ರವೀಂದ್ರ ಜಡೇಜ ಬದಲಿಗೆ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶೇಷ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಶೇಷ ಭಾರತ ತಂಡ ಮಾ.14 ರಿಂದ 18ರ ತನಕ ನಾಗ್ಪುರದಲ್ಲಿ ನಡೆಯಲಿರುವ ಇರಾನಿ ಟ್ರೋಫಿ ಟೂರ್ನಿಯಲ್ಲಿ ರಣಜಿ ಟ್ರೋಫಿ ಚಾಂಪಿಯನ್ ವಿದರ್ಭ ತಂಡವನ್ನು ಎದುರಿಸಲಿದೆ. ‘‘ಜಡೇಜ ಗಾಯಗೊಂಡಿದ್ದು ಅವರಿಗೆ ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ’’ ಎಂದು ಬಿಸಿಸಿಐ ತಿಳಿಸಿದೆ. ‘‘ಅಶ್ವಿನ್‌ಗೆ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ ಕಾರಣ ಇತ್ತೀಚೆಗೆ ಕೊನೆಗೊಂಡಿದ್ದ ದೇವಧರ್ ಟ್ರೋಫಿಯಲ್ಲಿ ಆಡಿರಲಿಲ್ಲ. ಇದೀಗ ಅವರು ಚೇತರಿಸಿಕೊಂಡಿದ್ದು, ಆಡಲು ಫಿಟ್ ಆಗಿದ್ದಾರೆ’’ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಅಶ್ವಿನ್ ಹಾಗೂ ಜಡೇಜ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ಪ್ರಮುಖ ಬೌಲರ್‌ಗಳಾಗಿದ್ದಾರೆ. ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಈ ಇಬ್ಬರು ಆಟಗಾರರು ತಮ್ಮ ಸ್ಥಾನವನ್ನು ಕುಲ್‌ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್‌ಗೆ ಬಿಟ್ಟುಕೊಟ್ಟಿದ್ದಾರೆ.