ಚೀನಾ ವಿರುದ್ಧ ಡೇವಿಸ್‌ಕಪ್‌ಗೆ ಪೇಸ್?

Update: 2018-03-10 18:12 GMT

ಹೊಸದಿಲ್ಲಿ, ಮಾ.10: ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಮುಂದಿನ ತಿಂಗಳು ನಡೆಯಲಿರುವ ಚೀನಾ ವಿರುದ್ಧದ ಡೇವಿಸ್‌ಕಪ್‌ನಲ್ಲಿ ಭಾರತ ತಂಡಕ್ಕೆ ವಾಪಸಾಗುವ ಸಾಧ್ಯತೆಯಿದೆ. ಡೇವಿಸ್‌ಕಪ್‌ಗೆ ಭಾರತ ತಂಡ ರವಿವಾರ ಪ್ರಕಟವಾಗಲಿದೆ. ಕಳೆದ ಎಪ್ರಿಲ್‌ನಲ್ಲಿ ಉಝ್ಬೇಕಿಸ್ತಾನ ವಿರುದ್ಧ ನಡೆದ ಪಂದ್ಯಕ್ಕೆ ಪೇಸ್‌ರನ್ನು ತಂಡದಿಂದ ಕೈಬಿಡಲಾಗಿತ್ತು. ಬೆಂಗಳೂರು ಓಪನ್‌ನಲ್ಲಿ ನಾಯಕ ಮಹೇಶ್ ಭೂಪತಿ ಅವರು ಪೇಸ್‌ರನ್ನು ಕಡೆಗಣಿಸಿದ ಬಳಿಕ ಅವರು ತಂಡದಿಂದ ದೂರ ಉಳಿದಿದ್ದರು. ಏಷ್ಯಾ-ಒಶಿಯಾನಿಯ ಗ್ರೂಪ್-1 ಪಂದ್ಯದಲ್ಲಿ ಪೇಸ್ ಆಡಿದರೆ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚಾಗುತ್ತದೆ ಎಂದು ಎಐಟಿಎ ಅಧಿಕಾರಿಗಳ ಅಭಿಪ್ರಾಯವಾಗಿದೆ.

ನಾಯಕ ಭೂಪತಿ, ಡಬಲ್ಸ್ ಸ್ಪೆಷಲಿಸ್ಟ್ ರೋಹನ್ ಬೋಪಣ್ಣ ಅವರು ಪೇಸ್‌ರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲವೆಂಬ ವಿಷಯವನ್ನು ಬೆಟ್ಟು ಮಾಡಿದ ಎಐಟಿಎ ಅಧಿಕಾರಿ, ‘‘ಆಟಗಾರರು ವೈಯಕ್ತಿಕ ಭಿನ್ನಾಭಿಪ್ರಾಯ ಬದಿ ಗಿಟ್ಟು ದೇಶವನ್ನು ಮುನ್ನಡೆಸಬೇಕು. ತಂಡಕ್ಕಿಂತ ದೇಶ ಮುಖ್ಯ. ನಾಳೆ ನಡೆಯಲಿರುವ ಆಯ್ಕೆ ಸಮಿತಿ ಸಭೆಯಲ್ಲಿ ಪೇಸ್‌ಗೆ ಸ್ಥಾನ ಸಿಗುವುದು ಖಚಿತ’’ ಎಂದಿದ್ದಾರೆ.

ಪೇಸ್ ಆಯ್ಕೆಯಾದರೆ ಪೂರವ್ ರಾಜಾ ಸ್ಥಾನ ಕಳೆದುಕೊಳ್ಳಲಿದ್ದಾರೆ. ಪೇಸ್ ಡೇವಿಸ್‌ಕಪ್‌ನಲ್ಲಿ ಮತ್ತೊಂದು ಗೆಲುವು ಸಾಧಿಸಿದರೆ 43ನೇ ಜಯ ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿ ಇಟಲಿಯ ನಿಕೊಲಾ ಪೀಟ್ರಾಂಗೆಲ್ ದಾಖಲೆ ಮುರಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News