ಪ್ರಶಸ್ತಿ ನಿರೀಕ್ಷೆಯಲ್ಲಿ ಸಿಂಧು, ಶ್ರೀಕಾಂತ್

Update: 2018-03-13 18:20 GMT

ಬರ್ಮಿಂಗ್‌ಹ್ಯಾಮ್, ಮಾ.13: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಬುಧವಾರ ಇಲ್ಲಿ ಆರಂಭವಾಗಲಿದ್ದು, ಭಾರತದ ಪಿ.ವಿ. ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಅವರು ಕೋಚ್ ಪಿ. ಗೋಪಿಚಂದ್ ಮಾರ್ಗದರ್ಶನದಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಗೋಪಿಚಂದ್ 17 ವರ್ಷಗಳ ಹಿಂದೆ ಇಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

 ಈ ಟೂರ್ನಮೆಂಟ್ ಜಯಿಸುವುದು ಎಲ್ಲ ಶಟ್ಲರ್‌ಗಳಿಗೆ ಮಹಾ ಗೌರವ ಎಂದೇ ಪರಿಗಣಿಸಲ್ಪಟ್ಟಿದ್ದು,ಈವರೆಗೆ ಭಾರತದ ಪರ ಪ್ರಕಾಶ್ ಪಡುಕೋಣೆ(1980) ಹಾಗೂ ಗೋಪಿಚಂದ್(2001) ಪ್ರಶಸ್ತಿ ಜಯಿಸಿದ್ದಾರೆ.

ಸಿಂಧು ಹಾಗೂ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಹೊಸ ಆಟಗಾರರನ್ನು ಎದುರಿಸಲಿದ್ದು, ಮಾಜಿ ಫೈನಲಿಸ್ಟ್ ಸೈನಾ ನೆಹ್ವಾಲ್‌ಗೆ ಕಠಿಣ ಸವಾಲು ಎದುರಾಗಿದೆ. ಸೈನಾ ಮೊದಲ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ್ತಿ ಹಾಗೂ ಹಾಲಿ ಚಾಂಪಿಯನ್ ಚೈನೀಸ್ ತೈಪೆಯ ತೈ ಝು ಯಿಂಗ್‌ರನ್ನು ಎದುರಿಸಲಿದ್ದಾರೆ. ಯಿಂಗ್ ಅವರು ಸೈನಾರ ಬದ್ಧ ಎದುರಾಳಿಯಾಗಿದ್ದು 14 ಪಂದ್ಯಗಳಲ್ಲಿ 9ರಲ್ಲಿ ಜಯಶಾಲಿಯಾಗಿದ್ದಾರೆ. ಸೈನಾ ಕಳೆದ 7 ಪಂದ್ಯಗಳನ್ನು ಸೋತಿದ್ದಾರೆ. ಇದರಲ್ಲಿ ಇತ್ತೀಚೆಗೆ ನಡೆದ ಇಂಡೋನೇಷ್ಯಾ ಮಾಸ್ಟರ್ಸ್ ಫೈನಲ್ ಪಂದ್ಯವೂ ಸೇರಿದೆ.

ಮತ್ತೊಂದೆಡೆ ನಾಲ್ಕನೇ ಶ್ರೇಯಾಂಕದ ಸಿಂಧು ಥಾಯ್ಲೆಂಡ್ ಶಟ್ಲರ್ ಪಾರ್ನ್‌ಪಾವೀ ಚೊಚುವಾಂಗ್ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ.

  ಇದೇ ವೇಳೆ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಬ್ರೈಸ್ ಲೆವೆರ್ಡೆಝ್‌ರನ್ನು ಎದುರಿಸಲಿದ್ದಾರೆ. ಭಾರತ ಇತ್ತೀಚೆಗಿನ ದಿನಗಳಲ್ಲಿ ಗೋಪಿಚಂದ್ ಕೋಚಿಂಗ್‌ನಲ್ಲಿ ವಿಶ್ವಮಟ್ಟದಲ್ಲಿ ಶ್ರೇಷ್ಠ ಪ್ರದರ್ಶನದ ಮೂಲಕ ಗಮನ ಸೆಳೆದಿದೆ. ಸೈನಾ ನೆಹ್ವಾಲ್ 2015ರಲ್ಲಿ ಫೈನಲ್‌ಗೆ ತಲುಪಿ ಕರೊಲಿನಾ ಮರಿನ್ ವಿರುದ್ಧ ಸೋತಿರುವುದು, 2017ರಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿರುವುದು ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಇತ್ತೀಚೆಗಿನ ಸಾಧನೆಯಾಗಿದೆ.

ವಿಶ್ವದ ನಂ.3ನೇ ಆಟಗಾರ ಶ್ರೀಕಾಂತ್ 2017ರಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದು, ನಾಲ್ಕು ಸೂಪರ್ ಸರಣಿ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ವಿಶ್ವದ ನಂ.1 ಆಟಗಾರ ವಿಕ್ಟರ್ ಅಕ್ಸೆಲ್‌ಸನ್ ಮಂಡಿನೋವಿನಿಂದಾಗಿ ಟೂರ್ನಿಯಿಂದ ಹೊರಗುಳಿದ ಕಾರಣ ಶ್ರೀಕಾಂತ್ ಈ ವರ್ಷ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ಆಟಗಾರನಾಗಿದ್ದಾರೆ.

ಶ್ರೀಕಾಂತ್ ಕಳೆದ ವರ್ಷ ಮೊದಲ ಸುತ್ತಿನಲ್ಲಿ ಸೋತು ಹೊರ ನಡೆದಿದ್ದರು. ಈಬಾರಿ ಆ ತಪ್ಪನ್ನು ತಿದ್ದಿಕೊಳ್ಳಲು ಬಯಸಿದ್ದಾರೆ.

‘‘100 ವರ್ಷಗಳ ಇತಿಹಾಸವಿರುವ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಅತ್ಯಂತ ಪ್ರತಿಷ್ಠಿತ ಟೂರ್ನಿಯಾಗಿದೆ. ಆಲ್ ಇಂಗ್ಲೆಂಡ್‌ನಲ್ಲಿ ಪ್ರಕಾಶ್ ಸರ್ ಹಾಗೂ ಗೋಪಿಚಂದ್ ಸರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ನಮಗೆ ಅವರು ಯಾವಾಗಲೂ ಸ್ಫೂರ್ತಿಯಾಗಿದ್ದಾರೆ. ಇಂತಹ ಟೂರ್ನಿಗಳನ್ನು ಜಯಿಸಿದರೆ ಆಟಗಾರನಿಗೆ ಖಂಡಿತವಾಗಿಯೂ ಲೆಜೆಂಡರಿ ಸ್ಥಾನಮಾನ ಸಿಗಲಿದೆ’’ ಎಂದು ಶ್ರೀಕಾಂತ್ ಹೇಳಿದ್ದಾರೆ.

ಭಾರತೀಯ ಆಟಗಾರರ ಪೈಕಿ ಸಿಂಗಾಪುರ ಓಪನ್ ಚಾಂಪಿಯನ್ ಸಾಯಿ ಪ್ರಣೀತ್ ಹಾಗೂ ವಿಶ್ವದ ನಂ.12ನೇ ಆಟಗಾರ ಎಚ್.ಎಸ್. ಪ್ರಣಯ್ ಕೂಡ ಟೂರ್ನಿಯ ಕಪ್ಪುಕುದುರೆಗಳಾಗಿದ್ದಾರೆ. ಪ್ರಣೀತ್ ಮೊದಲ ಸುತ್ತಿನಲ್ಲಿ ಕೊರಿಯಾದ ಸನ್ ವಾನ್ ಹೊರನ್ನು, ಪ್ರಣಯ್ 8ನೇ ಶ್ರೇಯಾಂಕದ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್‌ರನ್ನು ಎದುರಿಸಲಿದ್ದಾರೆ.

ಡಬಲ್ಸ್ ಇವೆಂಟ್‌ನಲ್ಲಿ ಇಂಡೋನೇಷ್ಯಾ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್ ರಾಣಿಕ್ ರೆಡ್ಡಿ ಅವರು ಮೊದಲ ಸುತ್ತಿನಲ್ಲಿ ಜಪಾನ್‌ನ ಟಾಕುರು ಹೊಕಿ ಹಾಗೂ ಯುಗೊ ಕೊಬಯಾಶಿ ಅವರನ್ನು ಎದುರಿಸಲಿದ್ದಾರೆ.

ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಜೋಡಿ ಮಾರ್ಕಸ್ ಎಲ್ಲಿಸ್ ಹಾಗೂ ಕ್ರಿಸ್ ಲಾಂಗ್ರಿಡ್ಜ್‌ರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್.ಸಿಕ್ಕಿ ರೆಡ್ಡಿ ಜೋಡಿ ಮೊದಲ ಸುತ್ತಿನಲ್ಲಿ ಜಪಾನ್‌ನ ಮಿಸಾಕಿ ಮಟ್ಸುಮೊ ಹಾಗೂ ಅಯಾಕ ಟಕಹಶಿ ಅವರನ್ನು ಎದುರಿಸಲಿದೆ.

ಮಿಶ್ರ ಡಬಲ್ಸ್‌ನಲ್ಲಿ ಪ್ರಣಯ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಮೊದಲ ಸುತ್ತಿನಲ್ಲಿ ಜರ್ಮನಿಯ ಮರ್ವಿನ್ ಎಮಿಲ್ ಹಾಗೂ ಲಿಂಡಾ ಎಫ್ಲೆರ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News