ಫೆಡರರ್ ಸೆಮಿ ಫೈನಲ್‌ಗೆ ಲಗ್ಗೆ

Update: 2018-03-16 18:13 GMT

ಇಂಡಿಯನ್ ವೆಲ್ಸ್, ಮಾ.16: ದಕ್ಷಿಣ ಕೊರಿಯಾದ ಚುಂಗ್ ಹಿಯೊನ್‌ರನ್ನು 7-5, 6-1 ನೇರ ಸೆಟ್‌ಗಳಿಂದ ಮಣಿಸಿದ ವಿಶ್ವದ ನಂ.1 ಆಟಗಾರ ರೋಜರ್ ಫೆಡರರ್ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಫೆಡರರ್ ಹಾಗೂ ಚುಂಗ್ ಆಸ್ಟ್ರೇಲಿಯನ್ ಓಪನ್ ಸೆಮಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಕೊರಿಯ ಆಟಗಾರ ಬಲಗಾಲಿನ ನೋವಿನಿಂದಾಗಿ 6-1, 5-2 ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ನಿವೃತ್ತಿಯಾಗಿದ್ದರು. ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಪ್ರಶಸ್ತಿ ಜಯಿಸಿದ ಫೆಡರರ್ 36ನೇ ವಯಸ್ಸಿನಲ್ಲಿ ಮತ್ತೊಮ್ಮೆ ನಂ.1 ಆಟಗಾರನಾಗಿದ್ದಾರೆ.

ಫೆಡರರ್ ಮುಂದಿನ ಸುತ್ತಿನಲ್ಲಿ ಕ್ರೊಯೇಷಿಯದ ಬೋರ್ನ ಕೊರಿಕ್‌ರನ್ನು ಎದುರಿಸಲಿದ್ದಾರೆ. ಕೊರಿಕ್ 7ನೇ ಶ್ರೇಯಾಂಕದ ದಕ್ಷಿಣ ಆಫ್ರಿಕ ಆಟಗಾರ ಕೇವಿನ್ ಆ್ಯಂಡರ್ಸನ್‌ರನ್ನು 2-6, 6-4, 7-6(3) ಸೆಟ್‌ಗಳಿಂದ ಮಣಿಸಿದರು.

►ವೀನಸ್ ವಿಲಿಯಮ್ಸ್ ಸೆಮಿ ಫೈನಲ್‌ಗೆ: ಇದೇ ವೇಳೆ ಮಹಿಳೆಯರ ಸಿಂಗಲ್ ್ಸನಲ್ಲಿ ಅಮೆರಿಕ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ವಿಲಿಯಮ್ಸ್ ಅವರು ಕಾರ್ಲಾ ಸುಯರೆಝ್ ನವಾರ್ರೊರನ್ನು 6-3, 6-2 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಈವರೆಗೆ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಜಯಿಸಲು ವಿಫಲವಾಗಿರುವ ವಿಲಿಯಮ್ಸ್ ಮುಂದಿನ ಸುತ್ತಿನಲ್ಲಿ ರಶ್ಯದ 20ರ ಹರೆಯದ ಆಟಗಾರ್ತಿ ಡರಿಯಾ ಕಸಟ್‌ಕಿನಾರನ್ನು ಎದುರಿಸಲಿದ್ದಾರೆ. 37ರ ಹರೆಯದ ವಿಲಿಯಮ್ಸ್ ಟೂರ್ನಿಯಲ್ಲಿ ಆಡುತ್ತಿರುವ ಹಿರಿಯ ಆಟಗಾರ್ತಿ.

ಕಸಟ್‌ಕಿನಾ ಕೇವಲ 58 ನಿಮಿಷದ ಆಟದಲ್ಲಿ ಮಾಜಿ ನಂ.1 ಏಂಜೆಲಿಕ್ ಕೆರ್ಬರ್‌ರನ್ನು 6-0, 6-2 ನೇರ ಸೆಟ್‌ಗಳಿಂದ ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News