×
Ad

ಶ್ರೀಲಂಕಾ ಧ್ವಜದೊಂದಿಗೆ ರೋಹಿತ್ ಪಡೆಯ ವಿಜಯೋತ್ಸವ

Update: 2018-03-19 21:56 IST

ಕೊಲಂಬೊ, ಮಾ.19: ಬಾಂಗ್ಲಾದೇಶ ವಿರುದ್ಧದ ನಿದಾಸ್ ಟ್ರೋಫಿ ಟ್ವೆಂಟಿ -20 ತ್ರಿಕೋನ ಸರಣಿಯ ಫೈನಲ್‌ನಲ್ಲಿ ಭಾರತ ಗೆಲುವು ದಾಖಲಿಸಿದ ಬೆನ್ನಲ್ಲೇ ಭಾರತದ ಆಟಗಾರರು ಶ್ರೀಲಂಕಾದ ಧ್ವಜದೊಂದಿಗೆ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಿದ ಘಟನೆ ವರದಿಯಾಗಿದೆ.

ದಿನೇಶ್ ಕಾರ್ತಿಕ್ ಕೊನೆಯ ಓವರ್‌ನಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ಗೆಲುವು ತಂದು ಕೊಟ್ಟ ಬಳಿಕ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತದ ಆಟಗಾರರು ಶ್ರೀಲಂಕಾದ ಧ್ವಜದೊಂದಿಗೆ ಕ್ರೀಡಾಂಗಣಕ್ಕೆ ಇಳಿದು ಅಚ್ಚರಿ ಮೂಡಿಸಿದ್ದಾರೆ.

 ಫೈನಲ್‌ನಲ್ಲಿ ಸಹಸ್ರಾರು ಮಂದಿ ಲಂಕಾದ ಕ್ರಿಕೆಟ್ ಅಭಿಮಾನಿಗಳು ಭಾರತವನ್ನು ಬೆಂಬಲಿಸಿದ್ದರು. ಭಾರತದ ಆಟಗಾರರು ಲಂಕಾದ ರಾಷ್ಟ್ರ ಧ್ವಜದೊಂದಿಗೆ ಹೆಜ್ಜೆ ಸಂಭ್ರಮಿಸುತ್ತಿರುವುದನ್ನು ನೋಡಿ ಲಂಕಾದ ಅಭಿಮಾನಿಗಳು ರೋಮಾಂಚನಗೊಂಡರು.

ರೋಹಿತ್ ಶರ್ಮಾ ಬ್ಯಾಟ್ ಮಾಡುತ್ತಿದ್ದಾಗ ತ್ರಿವರ್ಣ ಧ್ವಜ ಹಿಡಿದ ಲಂಕಾದ ಅಭಿಮಾನಿಗಳು ಅವರಿಗೆ ಜೈಕಾರ ಕೂಗಿದ್ದರು. ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾ ಗೆಲುವು ದಾಖಲಿಸಿತ್ತು. ಇದರಿಂದಾಗಿ ಲಂಕಾ ಫೈನಲ್‌ಗೇರುವಲ್ಲಿ ಎಡವಿತ್ತು. ಈ ವೇಳೆ ಬಾಂಗ್ಲಾ ಆಟಗಾರರ ವರ್ತನೆಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಕಾರಣದಿಂದಾಗಿ ಲಂಕಾದ ಅಭಿಮಾನಿಗಳು ಫೈನಲ್‌ನಲ್ಲಿ ಭಾರತದ ಗೆಲುವನ್ನು ಬಯಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News