ಮಾಲ್ದೀವ್ಸ್: ತುರ್ತು ಪರಿಸ್ಥಿತಿ ಮುಂದುವರಿಕೆಯಿಲ್ಲ

Update: 2018-03-20 16:54 GMT

ಕೊಲಂಬೊ, ಮಾ. 20: ಮಾಲ್ದೀವ್ಸ್‌ನಲ್ಲಿ ಹೇರಲಾಗಿರುವ 45 ದಿನಗಳ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಅಬ್ದುಲ್ಲಾ ಯಮೀನ್ ಗುರುವಾರ ತೆರವುಗೊಳಿಸಲಿದ್ದಾರೆ ಹಾಗೂ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಮತ್ತು ಮುಖ್ಯ ನ್ಯಾಯಾಧೀಶರ ವಿರುದ್ಧ ಸರಕಾರ ಲಂಚ ಸ್ವೀಕರಿಸಿದ ಮೊಕದ್ದಮೆಯನ್ನು ದಾಖಲಿಸಲಿದೆ ಎಂದು ದೇಶದ ಹಿರಿಯ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ.

ಜೈಲಿನಲ್ಲಿರುವ ಪ್ರತಿಪಕ್ಷಗಳ 9 ನಾಯಕರ ವಿರುದ್ಧದ ಆರೋಪಗಳನ್ನು ಫೆಬ್ರವರಿ 1ರಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅವರನ್ನು ಬಿಡುಗಡೆ ಮಾಡುವಂತೆ ಸರಕಾರಕ್ಕೆ ಆದೇಶ ನೀಡಿ ತೀರ್ಪು ನೀಡಿತ್ತು. ಈ ತೀರ್ಪು ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದಲ್ಲಿ ಭಾರೀ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿತು.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತನ್ನ ಸರಕಾರಕ್ಕೆ ಉಳಿಗಾಲವಿಲ್ಲ ಎಂಬುದನ್ನು ಮನಗಂಡ ಅಧ್ಯಕ್ಷ ಯಮೀನ್ ಫೆಬ್ರವರಿ 5ರಂದು 15 ದಿನಗಳ ಅವಧಿಗೆ ತುರ್ತು ಪರಿಸ್ಥಿತಿ ಹೇರಿದರು. ಈ ಅವಧಿ ಮುಗಿದ ಬಳಿಕ ತುರ್ತು ಪರಿಸ್ಥಿತಿಯನ್ನು ಮತ್ತೆ 30 ದಿನಗಳಿಗೆ ವಿಸ್ತರಿಸಿದರು.

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಯಮೀನ್ ಸರಕಾರ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್, ಮುಖ್ಯ ನ್ಯಾಯಾಧೀಶ, ಸುಪ್ರೀಂ ಕೋರ್ಟ್‌ನ ಇನ್ನೋರ್ವ ನ್ಯಾಯಾಧೀಶ ಮತ್ತು ಸುಪ್ರೀಂ ಕೋರ್ಟ್‌ನ ಆಡಳಿತಾಧಿಕಾರಿಯನ್ನು ಸರಕಾರ ಉರುಳಿಸಲು ಪ್ರಯತ್ನಿಸಿದ ಆರೋಪದಲ್ಲಿ ಬಂಧಿಸಲಾಯಿತು.

‘‘ಯಾವುದೇ ಅಸಾಧಾರಣ ಬೆಳವಣಿಗೆಗಳು ನಡೆಯದಿದ್ದರೆ, ಗುರುವಾರದ ವೇಳೆಗೆ ತುರ್ತು ಪರಿಸ್ಥಿತಿ ಇರುವುದಿಲ್ಲ’’ ಎಂದು ಶ್ರೀಲಂಕಾಕ್ಕೆ ಮಾಲ್ದೀವ್ಸ್ ರಾಯಭಾರಿ ಮುಹಮ್ಮದ್ ಹುಸೈನ್ ಶರೀಫ್ ವಿದೇಶಿ ವರದಿಗಾರರ ಸಂಘದ ಕಾರ್ಯಕ್ರಮವೊಂದರಲ್ಲಿ ಸೋಮವಾರ ಹೇಳಿದರು.

ಮುಖ್ಯ ನ್ಯಾಯಾಧೀಶ ಅಬ್ದುಲ್ಲಾ ಸಯೀದ್, ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಲಿ ಹಮೀದ್, ಮಾಜಿ ಅಧ್ಯಕ್ಷ ಗಯೂಮ್ ಮತ್ತು ಸುಪ್ರೀಂ ಕೋರ್ಟ್ ಆಡಳಿತಾಧಿಕಾರಿ ಹಸನ್ ಸಯೀದ್ ವಿರುದ್ಧ ಲಂಚ ನೀಡಿದ ಮತ್ತು ಸ್ವೀಕರಿಸಿದ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News