ಉಗ್ರ ನಿಗ್ರಹವಿಲ್ಲದಿದ್ದರೆ ರಕ್ಷಣಾ ನೆರವು ಮುಂದುವರಿಕೆಯಿಲ್ಲ: ಪಾಕ್‌ಗೆ ಅಮೆರಿಕ ತಾಕೀತು

Update: 2018-03-20 16:57 GMT

ವಾಶಿಂಗ್ಟನ್, ಮಾ. 20: ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ಒದಗಿಸಲಾಗುತ್ತಿರುವ ಬಗ್ಗೆ ಅಮೆರಿಕ ವ್ಯಕ್ತಪಡಿಸಿರುವ ಕಳವಳಗಳು ಶಮನವಾಗದಿದ್ದರೆ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ರಕ್ಷಣಾ ನೆರವನ್ನು ಮುಂದುವರಿಸಲಾಗುವುದಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಹೇಳಿದೆ.

ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ತೆಗೆದುಕೊಳ್ಳುವ ಕ್ರಮಗಳಿಂದ ಅಫ್ಘಾನಿಸ್ತಾನ, ಭಾರತ ಸೇರಿದಂತೆ ಈ ಇಡೀ ವಲಯಕ್ಕೆ ಪ್ರಯೋಜನವಾಗಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಪಾಕಿಸ್ತಾನ ಅಫ್ಘಾನ್ ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್ ಮುಂತಾದ ಭಯೋತ್ಪಾದಕ ಗುಂಪುಗಳಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿ ಅಮೆರಿಕ ಜನವರಿಯಲ್ಲಿ 1.15 ಬಿಲಿಯ ಡಾಲರ್ (ಸುಮಾರು 7,500 ಕೋಟಿ ರೂ.) ಭದ್ರತಾ ನೆರವನ್ನು ಸ್ಥಗಿತಗೊಳಿಸಿತ್ತು.

ಅದೂ ಅಲ್ಲದೆ, 2017ರ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ಸಂಪೂರ್ಣ ಮೈತ್ರಿಕೂಟ ಬೆಂಬಲ ನಿಧಿ (ಸಿಎಸ್‌ಎಫ್) 900 ಮಿಲಿಯ ಡಾಲರ್ (ಸುಮಾರು 5,867 ಕೋಟಿ ರೂಪಾಯಿ) ಮೊತ್ತವನ್ನೂ ಪೆಂಟಗನ್ ತಡೆಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News