ಪವಿತ್ರ ಭೂಮಿಯಲ್ಲಿ ಅಸಹಾಯಕರ ಹತ್ಯೆ ನಿಲ್ಲಲಿ: ಪೋಪ್ ಫ್ರಾನ್ಸಿಸ್‌ರಿಂದ ಈಸ್ಟರ್ ಸಂದೇಶ

Update: 2018-04-01 16:53 GMT

ವ್ಯಾಟಿಕನ್ ಸಿಟಿ, ಎ. 1: ‘ಹೋಲಿ ಲ್ಯಾಂಡ್’ (ಯಹೂದಿಗಳು, ಕ್ರೈಸ್ತರು ಮತ್ತು ಮುಸ್ಲಿಮರು ಪವಿತ್ರ ಎಂಬುದಾಗಿ ಭಾವಿಸುವ ಇಸ್ರೇಲ್ ಮತ್ತು ಫೆಲೆಸ್ತೀನ್ ಭೂಭಾಗಗಳು)ನಲ್ಲಿ ಶಾಂತಿ ಸ್ಥಾಪನೆಗಾಗಿ ಪೋಪ್ ಫ್ರಾನ್ಸಿಸ್ ರವಿವಾರ ತನ್ನ ಈಸ್ಟರ್ ಸಂದೇಶದಲ್ಲಿ ಕರೆ ನೀಡಿದ್ದಾರೆ. ಅಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಸಹಾಯಕರು ಬಲಿಯಾಗುತ್ತಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್-ಗಾಝಾ ಗಡಿಯಲ್ಲಿ ಎರಡು ದಿನಗಳ ಹಿಂದೆ ನಡೆದ ಸಂಘರ್ಷದಲ್ಲಿ 15 ಫೆಲೆಸ್ತೀನೀಯರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಸಂದೇಶವು ಮಹತ್ವ ಪಡೆದುಕೊಂಡಿದೆ.

 ಸೇಂಟ್ ಪೀಟರ್ಸ್ ಬ್ಯಾಸಿಲಿಕದ ಮಧ್ಯದ ಬಾಲ್ಕನಿಯಿಂದ ನೀಡಿದ ‘ಉರ್ಬಿ ಎಟ್ ಒರ್ಬಿ’ (ನಗರಕ್ಕೆ ಮತ್ತು ಜಗತ್ತಿಗೆ) ಸಂದೇಶದಲ್ಲಿ ಪೋಪ್ ಈ ಮನವಿ ಮಾಡಿದ್ದಾರೆ. ಕೆಳಗಿನ ಪುಷ್ಪಾಲಂಕಾರಗೊಂಡ ಚೌಕದಲ್ಲಿ ಹತ್ತಾರು ಸಾವಿರ ಜನರು ಅವರ ಭಾಷಣವನ್ನು ಆಲಿಸಿದರು.

ಸಿರಿಯದಲ್ಲಿನ ‘ಹತ್ಯಾಕಾಂಡ’ವೂ ಕೊನೆಯಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು ಹಾಗೂ ಸಂಘರ್ಷಪೀಡಿತ ಪ್ರದೇಶಗಳಿಗೆ ಮಾನವೀಯ ನೆರವು ಸಲಕರಣೆಗಳು ತಲುಪಬೇಕು ಎಂದು ಅವರು ಕರೆ ನೀಡಿದರು.

ದಕ್ಷಿಣ ಸುಡಾನ್ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿಯೂ ಶಾಂತಿ ನೆಲೆಸಬೇಕು ಎಂದು ಅವರು ಪ್ರಾರ್ಥಿಸಿದರು.

ಕಳೆದ ಶುಕ್ರವಾರ ನಡೆದ ಗಾಝಾ ಹಿಂಸಾಚಾರವನ್ನು ನೇರವಾಗಿ ಪ್ರಸ್ತಾಪಿಸಿದಂತೆ ಕಂಡುಬಂದ ಪೋಪ್, ಪವಿತ್ರ ಭೂಮಿಯಲ್ಲಿ ರಾಜಿಸಂಧಾನ ನಡೆಯಬೇಕು ಎಂದು ಕರೆ ನೀಡಿದರು.

‘‘ಈ ಈಸ್ಟರ್ ಸಂದರ್ಭದಲ್ಲಿ, ಎದ್ದು ಬಂದ ಕ್ರಿಸ್ತನ ಬೆಳಕು ಎಲ್ಲ ರಾಜಕೀಯ ಮತ್ತು ಸೇನಾ ನಾಯಕರ ಅಂತಃಸಾಕ್ಷಿಯನ್ನು ಬೆಳಗಲಿ ಹಾಗೂ ಎಲ್ಲಾ ಕಡೆ ನಡೆಯುತ್ತಿರುವ ಹತ್ಯಾಕಾಂಡ ಶೀಘ್ರ ಕೊನೆಯನ್ನು ಕಾಣಲಿ’’ ಎಂದು ಪೋಪ್ ಆಶಿಸಿದರು.

ಹತ್ಯೆಗಳ ತನಿಖೆ ನಿರಾಕರಿಸಿದ ಇಸ್ರೇಲ್

ಗಾಝಾ-ಇಸ್ರೇಲ್ ಗಡಿಯಲ್ಲಿ ಶುಕ್ರವಾರ ಫೆಲೆಸ್ತೀನೀಯರು ನಡೆಸಿದ ಬೃಹತ್ ಪ್ರತಿಭಟನೆಯ ವೇಳೆ ಇಸ್ರೇಲ್ ಸೈನಿಕರು ನಡೆಸಿದರು ಹತ್ಯೆಗಳ ಬಗ್ಗೆ ತನಿಖೆಯಾಗಬೇಕು ಎಂಬ ಕರೆಗಳನ್ನು ಇಸ್ರೇಲ್ ರಕ್ಷಣಾ ಸಚಿವರು ತಿರಸ್ಕರಿಸಿದ್ದಾರೆ.

 ಫೆಲೆಸ್ತೀನ್‌ನಲ್ಲಿರುವ ನಿರಾಶ್ರಿತರಿಗೆ ಇಸ್ರೇಲ್‌ನಲ್ಲಿರುವ ತಮ್ಮ ಮೂಲ ನೆಲೆಗಳಿಗೆ ಮರಳುವ ಅಧಿಕಾರ ನೀಡಬೇಕೆಂದು ಒತ್ತಾಯಿಸಿ ಹತ್ತಾರು ಸಾವಿರ ಫೆಲೆಸ್ತೀನೀಯರು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯ ವೇಳೆ ಇಸ್ರೇಲ್ ಸೈನಿಕರು ನಡೆಸಿದ ಗೋಲಿಬಾರಿನಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.

ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್, ಐರೋಪ್ಯ ಒಕ್ಕೂಟದ ವಿದೇಶ ನೀತಿ ಮುಖ್ಯಸ್ಥೆ ಫೆಡರಿಕಾ ಮೊಗೆರಿನಿ ಹಾಗೂ ಇತರ ನಾಯಕರು ಹಿಂಸಾಚಾರದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News