ಎಚ್-1ಬಿ ವೀಸಾಕ್ಕಾಗಿ ಅರ್ಜಿ ಸಲ್ಲಿಕೆ ಎ. 2ರಂದು ಆರಂಭ
ವಾಶಿಂಗ್ಟನ್, ಎ. 1: ಡೊನಾಲ್ಡ್ ಟ್ರಂಪ್ ಆಡಳಿತ ವಿಧಿಸಿರುವ ಅಪಾರ ನಿರ್ಬಂಧಗಳ ನಡುವೆಯೇ, ಭಾರತೀಯ ಐಟಿ ಉದ್ಯೋಗಿಗಳಲ್ಲಿ ಜನಪ್ರಿಯವಾಗಿರುವ ಎಚ್-1ಬಿ ವೀಸಾಗಳಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸೋಮವಾರ ಆರಂಭಗೊಳ್ಳಲಿದೆ.
ಅದೇ ವೇಳೆ, ವೀಸಾ ಅರ್ಜಿಗಳಲ್ಲಿರುವ ಸಣ್ಣಪುಟ್ಟ ತಪ್ಪುಗಳನ್ನೂ ಸಹಿಸಲಾಗುವುದಿಲ್ಲ ಎಂಬ ಪ್ರಬಲ ಸೂಚನೆಯನ್ನು ಎಚ್-1ಬಿ ವೀಸಾ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿರುವ ಪೌರತ್ವ ಮತ್ತು ವಲಸೆ ಸೇವೆಗಳ ಸಂಸ್ಥೆ ನೀಡಿದೆ.
ಈ ಬಾರಿ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿ ಹೊಂದಿರುವ ವಿದೇಶೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಅಮೆರಿಕದ ಕಂಪೆನಿಗಳಿಗೆ ಎಚ್-1ಬಿ ವೀಸಾ ಅವಕಾಶ ನೀಡುತ್ತದೆ. ತಂತ್ರಜ್ಞಾನ ಕಂಪೆನಿಗಳು ಎಚ್-1ಬಿ ವೀಸಾಗಳ ನೆರವಿನಿಂದ ಭಾರತ ಮತ್ತು ಚೀನಾ ಮುಂತಾದ ದೇಶಗಳಿಂದ ಸಾವಿರಾರು ಉದ್ಯೋಗಿಗಳನ್ನು ನೇಮಿಸುತ್ತವೆ.
ಪ್ರತಿ ಹಣಕಾಸು ವರ್ಷದಲ್ಲಿ ನೀಡಬಹುದಾದ ಎಚ್-1ಬಿ ವೀಸಾಗಳ ಸಂಖ್ಯೆಯನ್ನು ಅಮೆರಿಕದ ಸಂಸತ್ತು ಕಾಂಗ್ರೆಸ್ 65,000ಕ್ಕೆ ಮಿತಿಗೊಳಿಸಿದೆ.