ಡೌಮದಿಂದ ನಾಗರಿಕರ ತೆರವು: ಬಂಡುಕೋರರೊಂದಿಗೆ ರಶ್ಯ ಒಪ್ಪಂದ
Update: 2018-04-01 22:33 IST
ಬೈರೂತ್, ಎ. 1: ಸಿರಿಯದ ಪೂರ್ವ ಘೌಟದಲ್ಲಿನ ಬಂಡುಕೋರರ ಕೊನೆಯ ನೆಲೆಯಾಗಿರುವ ಡೌಮದಿಂದ ನೂರಾರು ನಾಗರಿಕರನ್ನು ತೆರವುಗೊಳಿಸಲು ರಶ್ಯವು ಬಂಡುಕೋರರೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ರವಿವಾರ ತಿಳಿಸಿದೆ.
‘‘ಇದ್ಲಿಬ್‌ಗೆ ಹೋಗಬಯಸಿರುವ ನೂರಾರು ನಾಗರಿಕನ್ನು ತೆರವುಗೊಳಿಸುವ ಆಂತಿಕ ಒಪ್ಪಂದವೊಂದು ಏರ್ಪಟ್ಟಿದೆ’’ ಎಂದು ವೀಕ್ಷಾಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರಹಮಾನ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಒಪ್ಪಂದದ ಪ್ರಕಾರ, ಒಟ್ಟು ಸುಮಾರು 1,300 ಜನರನ್ನು ತೆರವುಗೊಳಿಸಲಾಗುವುದು ಎಂದರು. ಅದೇ ವೇಳೆ, ಡೌಮವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿರುವ ಬಂಡುಕೋರರ ತೆರವಿನ ಬಗ್ಗೆ ಮಾತುಕತೆ ಈಗಲೂ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಮಾನವೀಯ ನೆರವಿನ ಅವಶ್ಯಕತೆ ಇರುವ ಜನರನ್ನು ತೆರವುಗೊಳಿಸಲು ಒಪ್ಪಂದವೊಂದಕ್ಕೆ ಬರಲಾಗಿದೆ ಎಂದು ಶನಿವಾರ ರಶ್ಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಾಗರಿಕ ಸಮಿತಿಯೊಂದು ಹೇಳಿದೆ.