×
Ad

ನೆಲ್ಸನ್ ಮಂಡೇಲರ ಮೊದಲ ಪತ್ನಿ, ವರ್ಣಭೇದ ಹೋರಾಟಗಾರ್ತಿ ವಿನ್ನಿ ಮಂಡೇಲ ನಿಧನ

Update: 2018-04-02 21:42 IST

ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಎ. 2: ದಕ್ಷಿಣ ಆಫ್ರಿಕದ ವರ್ಣಭೇದ ವಿರೋಧಿ ಹೋರಾಟಗಾರ್ತಿ ವಿನ್ನಿ ಮಂಡೇಲ ಸೋಮವಾರ ನಿಧನರಾಗಿದ್ದಾರೆ ಎಂದು ಅವರ ಆಪ್ತ ಕಾರ್ಯದರ್ಶಿ ಹೇಳಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಅವರು ವರ್ಣಭೇದ ವಿರೋಧಿ ಹೋರಾಟದ ದಂತಕತೆ ಹಾಗೂ ದಕ್ಷಿಣ ಆಫ್ರಿಕದ ಮೊದಲ ಕರಿಯ ಅಧ್ಯಕ್ಷ ನೆಲ್ಸನ್ ಮಂಡೇಲರ ಪ್ರಥಮ ಪತ್ನಿಯಾಗಿದ್ದರು.

ದಂಪತಿಯು ಸುಮಾರು ಮೂರು ದಶಕಗಳ ಕಾಲ ನಡೆದ ವರ್ಣಭೇದ ನೀತಿ ವಿರೋಧಿ ಚಳವಳಿಯ ಚಾಲಕ ಶಕ್ತಿಯಾಗಿದ್ದರು.

ದೀರ್ಘ ಕಾಲ ಕಾಯಿಲೆಯಿಂದ ಬಳಲುತ್ತಿದ್ದ ಅವರು ಜೊಹಾನ್ಸ್‌ಬರ್ಗ್‌ನ ನೆಟ್‌ಕೇರ್ ಮಿಲ್‌ಪಾರ್ಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಅವರ ಕುಟುಂಬ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

‘‘ವರ್ಣಭೇದ ಸರಕಾರದ ವಿರುದ್ಧ ಅವರು ದಿಟ್ಟ ಹೋರಾಟ ನಡೆಸಿದರು ಹಾಗೂ ದೇಶದ ಸ್ವಾತಂತ್ರಕ್ಕಾಗಿ ಅವರು ತನ್ನ ಬದುಕನ್ನೇ ತ್ಯಾಗ ಮಾಡಿದರು’’ ಎಂದು ಅದು ಹೇಳಿದೆ.

ಅವರು ನೆಲ್ಸನ್ ಮಂಡೇಲರೊಂದಿಗೆ 38 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದರು. ಈ ಅವಧಿಯಲ್ಲಿ 27 ವರ್ಷಗಳ ಕಾಲ ನೆಲ್ಸನ್ ಕೇಪ್ ಟೌನ್ ಸಮೀಪದ ರಾಬಿನ್ ದ್ವೀಪದಲ್ಲಿ ಕೈದಿಯಾಗಿದ್ದರು.

‘‘ನೆಲ್ಸನ್ ಮಂಡೇಲ ಜೈಲಿನಲ್ಲಿದ್ದಾಗ ವಿನ್ನಿ ಮಂಡೇಲ ಹೊರಗೆ ಅವರ ಚಳುವಳಿಯನ್ನು ಮುಂದುವರಿಸಿದರು ಹಾಗೂ ಅದನ್ನು ಜೀವಂತವಾಗಿಟ್ಟರು’’.

ಮಂಡೇಲ ದಕ್ಷಿಣ ಆಫ್ರಿಕದ ಅಧ್ಯಕ್ಷರಾಗಿ ಆಯ್ಕೆಯಾದ 2 ವರ್ಷಗಳ ಬಳಿಕ, 1996ರಲ್ಲಿ ದಂಪತಿ ಬೇರ್ಪಟ್ಟರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News