ನಿಯಂತ್ರಣ ಕಳೆದುಕೊಂಡ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಬಿದ್ದದ್ದೆಲ್ಲಿಗೆ?

Update: 2018-04-02 17:21 GMT

ಬೀಜಿಂಗ್, ಎ. 2: ನಿಯಂತ್ರಣ ಕಳೆದುಕೊಂಡಿದ್ದ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ‘ಟಿಯಾಂಗಾಂಗ್-1’ ಸೋಮವಾರ ಬೆಳಗ್ಗೆ ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಪತನಗೊಂಡಿದೆ.

ಪ್ರಯೋಗಾಲಯದ ಹೆಚ್ಚಿನ ಭಾಗಗಳು ಬೆಳಗ್ಗೆ 8:15ರ ಸುಮಾರಿಗೆ ಬೃಹತ್ ಸಮುದ್ರದ ಮಧ್ಯ ಭಾಗದ ಆಕಾಶದಲ್ಲಿ ಉರಿದುಹೋದವು ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಇಂಜಿನಿಯರಿಂಗ್ ಕಚೇರಿ ತಿಳಿಸಿದೆ.

ಪ್ರಯೋಗಾಲಯವು ಭೂಮಿಗೆ ಬೀಳುವಾಗ ಯಾವುದೇ ಹಾನಿ ಮಾಡುವುದಿಲ್ಲ ಎಂಬುದಾಗಿ ಬಾಹ್ಯಾಕಾಶ ಅಧಿಕಾರಿಗಳು ಹೇಳಿದ್ದರು. ಭೂಮಿಯ ವಾತಾವರಣದಲ್ಲಿ ಅದು ಹಾದು ಬರುವಾಗ ಉಲ್ಕಾ ವರ್ಷದಂಥ ‘ಭವ್ಯ’ ದೃಶ್ಯ ಉಂಟಾಗುತ್ತದೆ ಎಂದು ಚೀನಾದ ಬಾಹ್ಯಾಕಾಶ ಅಧಿಕಾರಿಗಳು ಹೇಳಿದ್ದಾರೆ.

ಭೂಮಿಯ ವಾತಾವರಣವನ್ನು ಅದು ಮರುಪ್ರವೇಶಿಸುವ ಸ್ಥಳವನ್ನು ಅದು ಸಂಭವಿಸುವ ಸ್ವಲ್ಪ ಸಮಯದ ಮುನ್ನವಷ್ಟೇ ನಿಖರವಾಗಿ ಹೇಳಲು ಸಾಧ್ಯ ಎಂದು ಅವರು ಹೇಳಿದ್ದರು.

ಅಂತಿಮವಾಗಿ, ಬಾಹ್ಯಾಕಾಶವು ಸಾವೋಪೌಲೊ ಆಚೆಗಿನ ಸಮುದ್ರದಲ್ಲಿ ಪತನಗೊಳ್ಳುತ್ತದೆ ಎಂಬುದಾಗಿ ಬಳಿಕ ಚೀನಾದ ಬಾಹ್ಯಾಕಾಶ ಸಂಸ್ಥೆ ಹೇಳಿತ್ತು.

‘ಟಿಯಾಂಗಾಂಗ್-1’ನ್ನು 2011 ಸೆಪ್ಟಂಬರ್‌ನಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಲಾಗಿತ್ತು. ಚೀನಾದ ಗಗನಯಾತ್ರಿಗಳು ಅದರಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿದ್ದರು. ಆದರೆ, 2016 ಮಾರ್ಚ್‌ನಲ್ಲಿ ಅದು ನಿಯಂತ್ರಣ ಕಳೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News