ಸುಳ್ಳು ಸುದ್ದಿ ವಿರುದ್ಧ ಪತ್ರಿಕಾ ಸಂಸ್ಥೆಗಳ ಹೋರಾಟ

Update: 2018-04-03 16:48 GMT

ಪ್ಯಾರಿಸ್, ಎ. 3: ಪತ್ರಕರ್ತರಿಗಾಗಿ ನೂತನ ವಿಶ್ವಾಸ ಮತ್ತು ಪಾರದರ್ಶಕತೆ ಮಾದರಿಗಳನ್ನು ಹೊರತರುವುದರೊಂದಿಗೆ, ಪತ್ರಕರ್ತರ ಸಂಘಟನೆ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್)’ ಮತ್ತು ಪ್ರಮುಖ ಟಿವಿ ಚಾನೆಲ್‌ಗಳು ಮಂಗಳವಾರ ಸುಳ್ಳು ಸುದ್ದಿ ವಿರುದ್ಧ ಹೋರಾಟ ಆರಂಭಿಸಿವೆ.

ಸುದ್ದಿ ಸಂಸ್ಥೆಗಳು ಮತ್ತು ಸುದ್ದಿ ಮೂಲಗಳು ಅತ್ಯುನ್ನತ ಮಟ್ಟದ ನೈತಿಕತೆ ಮತ್ತು ಸ್ವಾತಂತ್ರ್ಯವನ್ನು ಹೊಂದಿವೆ ಎಂಬ ಪ್ರಮಾಣಪತ್ರಗಳನ್ನು ‘ಜರ್ನಲಿಸಂ ಟ್ರಸ್ಟ್ ಇನಿಶಿಯೇಟಿವ್ (ಜೆಟಿಐ) ಎಂಬ ಸಂಸ್ಥೆ ನೀಡಲಿದೆ. ಈ ಸಂಸ್ಥೆಗೆ ಸುದ್ದಿ ಸಂಸ್ಥೆ ‘ಏಜೆನ್ಸಿ ಫ್ರಾನ್ಸ್ ಪ್ರೆಸ್’ (ಎಎಫ್‌ಪಿ), ಯುರೋಪಿಯನ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್ (ಇಬಿಯು) ಮತ್ತು ಗ್ಲೋಬಲ್ ಎಡಿಟರ್ಸ್ ನೆಟ್‌ವರ್ಕ್ ಬೆಂಬಲ ನೀಡಿವೆ.

ಗುಣಮಟ್ಟ ಮಾದರಿಗಳನ್ನು ಅಳವಡಿಸಿಕೊಳ್ಳುವ ಮಾಧ್ಯಮ ಸಂಸ್ಥೆಗಳಿಗೆ ಸರ್ಚ್ ಎಂಜಿನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳು ಆದ್ಯತೆ ನೀಡಬೇಕು ಎನ್ನುವುದು ಇದರ ಉದ್ದೇಶವಾಗಿದೆ ಎಂದು ಆರ್‌ಎಸ್‌ಎಫ್ ಮುಖ್ಯಸ್ಥ ಕ್ರಿಸ್ಟೋಫ್ ಡೆಲೋರ್ ಹೇಳಿದರು.

ಈ ಕ್ರಮವು ಪ್ರತಿನಿತ್ಯ ಸುಳ್ಳು ಸುದ್ದಿಗಳ ಆಕ್ರಮಣಕ್ಕೆ ಒಳಗಾಗುತ್ತಿರುವ ಜಗತ್ತಿನಲ್ಲಿ ‘ನಂಬಿಕಸ್ತ ಮಾಧ್ಯಮ ಪಟ್ಟ’ವನ್ನು ಒದಗಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News