ಅಸ್ಸಾಂ: 11 ವರ್ಷಗಳಲ್ಲಿ ದೌರ್ಜನ್ಯಕ್ಕೆ ಬಲಿಯಾದ ಮಹಿಳೆಯರೆಷ್ಟು ಗೊತ್ತೇ?

Update: 2018-04-04 04:16 GMT

ಗುವಾಹತಿ, ಎ.4: ಅತ್ಯಾಚಾರ, ವರದಕ್ಷಿಣೆ ಹಿಂಸೆ ಮತ್ತಿತರ ಪಿಡುಗುಗಳಿಗೆ 2006ರಿಂದೀಚೆಗೆ ಅಸ್ಸಾಂನಲ್ಲಿ 1,773 ಮಹಿಳೆಯರು ಬಲಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ಮಂಗಳವಾರ ಪ್ರಕಟಿಸಿದೆ.

ಸಂಸದೀಯ ವ್ಯವಹಾರಗಳ ಖಾತೆ ಸಚಿವ ಚಂದ್ರಮೋಹನ್ ಪಟೋವರಿ ಈ ಮಾಹಿತಿಯನ್ನು ರಾಜ್ಯ ವಿಧಾನಸಭೆಯಲ್ಲಿ ನೀಡಿದರು. ಗೃಹ ಖಾತೆಯನ್ನು ನಿರ್ವಹಿಸುತ್ತಿರುವ ಸರ್ವಾನಂದ ಸೋನೊವಾಲ್ ಪರವಾಗಿ ಸಚಿವರು ಈ ಉತ್ತರ ನೀಡಿದರು.

ಅತ್ಯಾಚಾರ ಪ್ರಕರಣಗಳಲ್ಲಿ 87 ಮಹಿಳೆಯರು, ವರದಕ್ಷಿಣೆ ಹಿಂಸೆಯಲ್ಲಿ 1,606 ಮಂದಿ ಹಾಗೂ ಮಾಟಗಾತಿಯರ ಬೇಟೆಯಲ್ಲಿ 80 ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ '181-ಸಖಿ' ಎಂಬ ಟೋಲ್‌ಫ್ರೀ ಸಹಾಯವಾಣಿ ಆರಂಭಿಸಿದೆ ಎಂದು ಸಚಿವರು ವಿವರ ನೀಡಿದರು.

ಮಹಿಳೆಯರ ವಿರುದ್ಧದ ಎಲ್ಲ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಸರ್ಕಾರ ಸೂಚನೆ ನೀಡಿದೆ ಎಂದು ವಿವರಿಸಿದರು. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ತ್ವರಿತ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಆರಂಭಿಸುವಂತೆ ಗುವಾಹತಿ ಹೈಕೋಟ್ ಮುಖ್ಯ ನ್ಯಾಯಮೂರ್ತಿಯನ್ನು ಸರ್ಕಾರ ವಿನಂತಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News