ಲಂಡನ್: ಸರಣಿ ಚೂರಿ ಇರಿತ
Update: 2018-04-06 23:49 IST
ಲಂಡನ್, ಎ. 6: ಕೆಲವೇ ಗಂಟೆಗಳ ಅವಧಿಯಲ್ಲಿ ಆರು ಚೂರಿ ಇರಿತದ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ, ಲಂಡನ್ ಪೊಲೀಸರು ಶುಕ್ರವಾರ ಸಮುದಾಯ ನಾಯಕರ ತುರ್ತು ಸಭೆಯೊಂದನ್ನು ಏರ್ಪಡಿಸಿದ್ದಾರೆ.
ಚೂರಿ ಇರಿತದ ಘಟನೆಗಳು ಗುರುವಾರ ಸಂಜೆ ನಡೆದಿದ್ದವು.
‘‘ಚೂರಿ ಇರಿತದ ಪ್ರಕರಣಗಳನ್ನು ನಾವೊಬ್ಬರೇ ನಿಭಾಯಿಸಲು ಸಾಧ್ಯವಿಲ್ಲ ಎನ್ನುವ ಬಗ್ಗೆ ನಾವು ಸ್ಪಷ್ಟ ಅಭಿಪ್ರಾಯ ಹೊಂದಿದ್ದೇವೆ. ನಮ್ಮಾಂದಿಗೆ ಸಮುದಾಯಗಳನ್ನು ಕರೆದುಕೊಂಡು ಹೋಗಲು ಹಾಗೂ ಲಂಡನನ್ನು ರಕ್ಷಿಸಲು ನಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ’’ ಎಂದು ಮೆಟ್ರೊಪೋಲಿಟನ್ ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಗುರುವಾರ ನಡೆದ ಚೂರಿ ದಾಳಿಗಳಲ್ಲಿ 13 ವರ್ಷದ ಓರ್ವ ಬಾಲಕ ಮತ್ತು 15 ವರ್ಷದ ಇಬ್ಬರು ಬಾಲಕರು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರ ಸ್ಥಿತಿ ಸ್ಥಿರವಾಗಿದೆ. ಈ ದಾಳಿಗಳಲ್ಲಿ ಮೃತಪಟ್ಟಿರುವ ಬಗ್ಗೆ ವರದಿಗಳು ಬಂದಿಲ್ಲ.