ಡೌಮ ಮೇಲೆ ಮತ್ತೆ ಭೀಕರ ಬಾಂಬ್ ದಾಳಿ
ಬೈರೂತ್ (ಲೆಬನಾನ್), ಎ. 7: ಸಿರಿಯ ರಾಜಧಾನಿ ಡಮಾಸ್ಕಸ್ ಹೊರವಲಯದಲ್ಲಿರುವ ಡೌಮ ಪಟ್ಟಣದ ಮೇಲೆ ಶುಕ್ರವಾರ ರಾತ್ರಿ ನಿರಂತರ ಬಾಂಬ್ ದಾಳಿ ನಡೆಸಿರುವ ಅಧ್ಯಕ್ಷ ಬಶರ್ ಅಲ್ ಅಸದ್ ಪರವಾಗಿರುವ ಪಡೆಗಳು, ಶನಿವಾರ ಮತ್ತೆ ಬಾಂಬ್ ದಾಳಿ ನಡೆಸಿದೆ.
‘‘ಬಾಂಬ್ ದಾಳಿ ಇನ್ನೂ ನಿಂತಿಲ್ಲ. ಆಕಾಶದಲ್ಲಿ 3 ಯುದ್ಧ ವಿಮಾನಗಳು ಮತ್ತು 2 ಹೆಲಿಕಾಪ್ಟರ್‌ಗಳು ಸುತ್ತುತ್ತಿವೆ’’ ಎಂದು ಡೌಮದಲ್ಲಿರುವ ರಕ್ಷಣಾ ಕಾರ್ಯಕರ್ತರೋರ್ವರು ಶನಿವಾರ ಬೆಳಗ್ಗೆ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಸಿರಿಯದ ಪೂರ್ವ ಘೌತದಲ್ಲಿ ಬಂಡುಕೋರರ ನಿಯಂತ್ರಣದಲ್ಲಿರುವ ಕೊನೆಯ ಪಟ್ಟಣ ಡೌಮ ಆಗಿದೆ.
ಡಮಾಸ್ಕಸ್‌ನ ಹೊರವಲಯದಲ್ಲಿರುವ ಪೂರ್ವ ಘೌತ ಒಂದು ಕಾಲದಲ್ಲಿ ಬಂಡುಕೋರರ ಭದ್ರಕೋಟೆಯಾಗಿತ್ತು.
ರಶ್ಯ ಯುದ್ಧವಿಮಾನಗಳ ನೆರವಿನೊಂದಿಗೆ, ಸಿರಿಯ ಸೈನಿಕರು ಪೂರ್ವ ಘೌತದ ಮೇಲೆ ಭೀಕರ ವಾಯು ಮತ್ತು ಭೂದಾಳಿಗಳನ್ನು ನಡೆಸಿ 95 ಶೇಕಡ ಭೂಭಾಗವನ್ನು ಮತ್ತ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಡೌಮ ಪಟ್ಟಣವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಜೈಶ್ ಅಲ್-ಇಸ್ಲಾಮ್ ಗುಂಪು ಅಲ್ಲಿಂದ ಹಿಂದೆ ಸರಿಯುವಂತೆ ಅದರ ಮೇಲೆ ಒತ್ತಡ ಹೇರುವ ಭಾಗವಾಗಿ, ಒಂದು ವಾರದ ವೌನದ ಬಳಿಕ ಪಟ್ಟಣದ ಮೇಲೆ ಭೀಕರ ಬಾಂಬ್ ದಾಳಿಗಳನ್ನು ನಡೆಸಲಾಗಿದೆ.
8 ಮಕ್ಕಳು ಸೇರಿ 40 ನಾಗರಿಕರು ಹತ
ಡೌಮ ಪಟ್ಟಣದ ಮೇಲೆ ಶುಕ್ರವಾರ ರಾತ್ರಿಯಿಡೀ ನಡೆದ ಬಾಂಬ್ ದಾಳಿಯಲ್ಲಿ 8 ಮಕ್ಕಳು ಸೇರಿದಂತೆ 40 ನಾಗರಿಕರು ಮೃತಪಟ್ಟಿದ್ದಾರೆ ಎಂದು ಬ್ರಿಟನ್‌ನ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಸಿರಿಯದ ಸರಕಾರಿ ಪಡೆಗಳು ಶನಿವಾರವೂ ಪಟ್ಟಣದಾದ್ಯಂತ ಬಾಂಬ್‌ಗಳನ್ನು ಹಾಕುತ್ತಿವೆ ಹಾಗೂ ಸರಕಾರಿ ಭೂಸೇನೆ ಹೊರವಲಯದ ಕೃಷಿಹೊಲಗಳ ಮೇಲೆ ಫಿರಂಗಿ ದಾಳಿಗಳನ್ನು ನಡೆಸುತ್ತಿದೆ ಎಂದು ಅದು ಹೇಳಿದೆ.