ಕೆನಡ: ಗಾಂಧಿ ಪ್ರತಿಮೆ ತೆಗೆಯಲು ಕರಿಯ ವಿದ್ಯಾರ್ಥಿ ಸಂಘಟನೆ ಒತ್ತಾಯ

Update: 2018-04-07 17:09 GMT

ಟೊರಾಂಟೊ (ಕೆನಡ), ಎ. 7: ಕೆನಡ ರಾಜಧಾನಿ ಒಟ್ಟಾವದಲ್ಲಿರುವ ಕಾರ್ಲ್‌ಟನ್ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ತೆರವುಗೊಳಿಸಬೇಕು ಎಂಬುದಾಗಿ ಆಫ್ರಿಕ ವಿದ್ಯಾರ್ಥಿಗಳ ಸಂಘಟನೆಯೊಂದು ಒತ್ತಾಯಿಸಿದೆ.

ಆಫ್ರಿಕನ್ ಅಧ್ಯಯನಗಳ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕೆನೆತ್ ಅಲಿಯು ಈ ಪ್ರತಿಭಟನಾ ಆಂದೋಲನದ ನೇತೃತ್ವವನ್ನು ವಹಿಸಿದ್ದಾರೆ.

ಗಾಂಧೀಜಿ ‘ಕರಿಯ-ವಿರೋಧಿ ಜನಾಂಗೀಯ ತಾರತಮ್ಯ ಮಾಡುತ್ತಿದ್ದರು ಎಂಬುದಾಗಿ ‘ಚಾರ್ಲಟನ್’ ವಾರಪತ್ರಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಕೆನೆತ್ ಆರೋಪಿಸಿದ್ದಾರೆ ಹಾಗೂ ಪ್ರತಿಮೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.

‘‘ಗಾಂಧಿ ಓರ್ವ ಜನಾಂಗೀಯವಾದಿ. ದಕ್ಷಿಣ ಆಫ್ರಿಕದಲ್ಲಿ ವಾಸಿಸುತ್ತಿರುವ ಭಾರತೀಯರ ಬಗ್ಗೆ ಬ್ರಿಟಿಷರೊಂದಿಗೆ ಚೌಕಾಸಿ ಮಾಡಲು ಅವರು ಕರಿಯ ವಿರೋಧಿ ಜನಾಂಗೀಯ ನಿಂದನೆಯನ್ನು ಬಳಸಿಕೊಂಡರು’’ ಎಂದು ಅವರು ತನ್ನ ಲೇಖನದಲ್ಲಿ ಬರೆದಿದ್ದಾರೆ.

‘‘ಅವರು ದಕ್ಷಿಣ ಆಫ್ರಿಕದ ಕಪ್ಪು ವರ್ಣೀಯರನ್ನು ‘ಕಾಫಿರ್’ ಎಂಬುದಾಗಿ ಕರೆಯುತ್ತಿದ್ದರು. ಇದು ಅತ್ಯಂತ ಅವಮಾನಕರ ಪದ. ದಕ್ಷಿಣ ಆಫ್ರಿಕದಲ್ಲಿ ಅವರು ಕಳೆದ 20 ವರ್ಷಗಳ ಅವಧಿಯಲ್ಲಿ, ಕರಿಯರ ಬಗ್ಗೆ ಅವರು ಹೊಂದಿದ್ದ ಜನಾಂಗೀಯ ಭಾವನೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News