ಉಗ್ರ ಗುಂಪುಗಳಿಗೆ ಪಾಕ್ ಅಂಕುಶ
ಇಸ್ಲಾಮಾಬಾದ್,ಎ.8: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿಯೆನ್ನಲಾದ ಹಾಫೀಝ್ ಸಯೀದ್ ನೇತೃತ್ವದ ಜಮಾತುದ್ದವಾ ಸೇರಿದಂತೆ ಗೃಹ ಸಚಿವಾಲಯದ ಕಣ್ಗಾವಲಿನಲ್ಲಿರುವ ಭಯೋತ್ಪಾದಕ ಗುಂಪುಗಳು ಹಾಗೂ ವ್ಯಕ್ತಿಗಳನ್ನು ಶಾಶ್ವತವಾಗಿ ನಿಷೇಧಿಸುವ ಕಾನೂನೊಂದನ್ನು ಜಾರಿಗೊಳಿಸುವ ಉದ್ದೇಶದಿಂದ ಪಾಕ್ ಸರಕಾರವು ಕರಡು ವಿಧೇಯಕವೊಂದನ್ನು ಸಿದ್ಧಪಡಿಸುತ್ತಿದೆ. ಪಾಕ್ ಸರಕಾರದ ಈ ನಡೆಗೆ ಸೇನೆಯ ಬೆಂಬಲವೂ ಇದೆಯೆಂದು ತಿಳಿದುಬಂದಿದೆ.
ಈಗಾಗಲೇ ಗೃಹ ಸಚಿವಾಲಯದ ಕಣ್ಗಾವಲು ಪಟ್ಟಿಯಲ್ಲಿರುವ ಸಂಘಟನೆಗಳು ಆಹಗೂ ಜನರನ್ನು ನಿಷೇಧಿಸುವ ಅಧ್ಯಕ್ಷೀಯ ಅಧ್ಯಾದೇಶದ ಬದಲಿಗೆ ನೂತನ ವಿಧೇಯಕವು ಜಾರಿಗೆ ಬರಲಿದೆಯೆಂದು ಡಾನ್ ಪತ್ರಿಕೆ ವರದಿ ಮಾಡಿದೆ.
1997ರ ಭಯೋತ್ಪಾದನೆ ನಿಗ್ರಹ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪಿತ ಕರಡು ವಿಧೇಯಕವನ್ನು ನಾಳೆಯಿಂದ ಆರಂಭಗೊಳ್ಳಲಿರುವ ರಾಷ್ಟ್ರೀಯ ಅಸೆಂಬ್ಲಿಯ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆಯೆಂದು ಡಾನ್ ತಿಳಿಸಿದೆ.
ಪ್ರಸ್ತಾಪಿತ ಕರಡು ಮಸೂದೆಗೆ ಕಾನೂನು ಸಚಿವಾಲಯ ಅಂತಿಮ ರೂಪು ನೀಡುತ್ತಿದ್ದು, ಮಿಲಿಟರಿ ಕೂಡಾ ಕರಡು ಮಸೂದೆ ರಚನಾ ಮಂಡಳಿಯಲ್ಲಿದೆ ಎಂದು ಪತ್ರಿಕೆ ಹೇಳಿದೆ. ಪಾಕಿಸ್ತಾನದ ನೀತಿ ನಿರ್ಧಾರಗಳನ್ನು ರೂಪಿಸುವಲ್ಲಿ ಆ ದೇಶದ ಮಿಲಿಟರಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ಕಪ್ಪುಹಣ ಬಿಳುಪುಗೊಳಿಸುವಿಕೆ ಹಾಗೂ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ರಾಷ್ಟ್ರಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರ್ಪಡೆಗೊಳಿಸಲು ಅಮೆರಿಕ,ಬ್ರಿಟನ್, ಫ್ರಾನ್ಸ್ ಹಾಗೂ ಜರ್ಮನಿ ಜಂಟಿಯಾಗಿ ಮಂಡಿಸಿದ ಪ್ರಸ್ತಾಪಕ್ಕೆ ವಿತ್ತೀಯ ಕ್ರಿಯಾ ಪಡೆದ (ಎಫ್‌ಎಟಿಎಫ್) ಅನುಮೋದನೆ ನೀಡಿದ ಬಳಿಕ, ತನ್ನ ವರ್ಚಸ್ಸಿನ ಮೇಲೆ ಉಂಟಾಗಿರುವ ಹಾನಿಯನ್ನು ಸರಿಪಡಿಸುವ ಉದ್ದೇಶದಿಂದ ಪಾಕಿಸ್ತಾನವು, ಎಟಿಎ ಮಸೂದೆಗೆ ತಿದ್ದುಪಡಿ ತರುವ ಅಧ್ಯಾದೇಶವನ್ನು ಮಂಡಿಸಲು ಮುಂದಾಗಿದೆಯೆನ್ನಲಾಗಿದೆ.
ಕರಡು ವಿಧೇಯಕದ ಜೊತೆಗೆ, ಪಾಕಿಸ್ತಾನವು ಕುಖ್ಯಾತ ಭಯೋತ್ಪಾದಕರು ಹಾಗೂ ಭಯೋತ್ಪಾದಕ ಸಂಘಟನೆಗಳ ಸಮಗ್ರ ಡಾಟಾಬೇಸ್‌ವೊಂದನ್ನು ಕೂಡಾ ಸಿದ್ಧಪಡಿಸುತ್ತಿದೆ. ಇದರಿಂದಾಗಿ ದೇಶದ ಹಣಕಾಸು ಸಂಸ್ಥೆಗಳು ಹಾಗೂ ಕಾನೂನು ಜಾರಿ ಏಜೆನ್ಸಿಗಳಿಗೆ, ಕಪ್ಪುಹಣ ಬಿಳುಪುಗೊಳಿಸುವಿಕೆ ಹಾಗೂ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವವರ ವಿರುದ್ಧ ಕಠಿಣಕ್ರಮವನ್ನು ಕೈಗೊಳ್ಳಲು ಆಡಳಿತಯಂತ್ರವನ್ನು ಬಲಪಡಿಸಲು ಸಾಧ್ಯವಾಗಲಿದೆ.