ಕಾವೇರಿ ಗಲಾಟೆ: ಐಪಿಎಲ್ ಪಂದ್ಯಗಳು ಚೆನ್ನೈನಿಂದ ಬೇರಡೆಗೆ ಸ್ಥಳಾಂತರ?

Update: 2018-04-11 12:19 GMT

ಚೆನ್ನೈ, ಎ.11: ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯ ವೇಳೆ ಚೆನ್ನೈನಲ್ಲಿ ನಡೆಯಲಿರುವ ಪಂದ್ಯಗಳು ಬೇರೆಡೆಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಚೆನ್ನೈ ಸೂಪರ್ ಕಿಂಗ್ಸ್ ತವರು ಮೈದಾನದಲ್ಲಿ ಆಡಲಿರುವ ಇನ್ನುಳಿದ ಏಳು ಪಂದ್ಯಗಳನ್ನು ಆಡಲು ಕೊಚ್ಚಿ, ತಿರುವನಂತಪುರ, ವಿಝಾಗ್ ಹಾಗೂ ಹೈದರಾಬಾದ್ ನಗರಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡುವಂತೆ ಬಿಸಿಸಿಐ ಚೆನ್ನೈ ತಂಡಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರಕಾರವನ್ನು ಸಂಪರ್ಕಿಸಲು ನಿರ್ಧರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನುಳಿದ ಪಂದ್ಯಗಳಿಗೆ ಬಿಗಿ ಭದ್ರತೆ ನೀಡುವಂತೆ ಕೇಳಿಕೊಳ್ಳಲು ನಿರ್ಧರಿಸಿದೆ.ನಾವು ಎಲ್ಲ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿಎಸ್‌ಕೆ ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಸ್‌ಕೆ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಮಂಗಳವಾರ ರಾತ್ರಿ ನಡೆದ ಐಪಿಎಲ್ ಪಂದ್ಯದ ವೇಳೆ ಚೆನ್ನೈ ಆಟಗಾರ ರವೀಂದ್ರ ಜಡೇಜರತ್ತ ಶೂ ಎಸೆದ ವ್ಯಕ್ತಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈನಲ್ಲಿ ಐಪಿಎಲ್ ಪಂದ್ಯವನ್ನು ರದ್ದುಪಡಿಸಬೇಕೆಂದು ಹಲವು ರಾಜಕೀಯ ಸಂಘಟನೆಗಳು ಹಾಗೂ ವಿವಿಧ ತಮಿಳು ಸಂಘಟನೆಗಳು ಮಂಗಳವಾರ ತೀವ್ರ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಯ ಕಾರಣದಿಂದ ಪಂದ್ಯ ವಿಳಂಬವಾಗಿ ಆರಂಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News