ನಿಯಮ ಉಲ್ಲಂಘನೆ ಆರೋಪ: ಕ್ರೀಡಾಗ್ರಾಮದಿಂದ ರಾಕೇಶ್, ಇರ್ಫಾನ್ ಹೊರಕ್ಕೆ
ಗೋಲ್ಡ್‌ಕೋಸ್ಟ್, ಎ.13: ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್‌ನ(ಸಿಜಿಎಫ್)ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದಲ್ಲಿ ಭಾರತದ ಇಬ್ಬರು ಅಥ್ಲೀಟ್‌ಗಳಾದ ರೇಸ್‌ವಾಕರ್ ಕೆ.ಟಿ. ಇರ್ಫಾನ್ ಹಾಗೂ ಟ್ರಿಪಲ್ ಜಂಪ್‌ಪಟು ರಾಕೇಶ್ ಬಾಬು ಅವರನ್ನು ಕ್ರೀಡಾಗ್ರಾಮದಿಂದ ಹೊರಹಾಕಲಾಗಿದೆ. ಇಬ್ಬರನ್ನು ಆಸ್ಟ್ರೇಲಿಯದಿಂದ ತಕ್ಷಣವೇ ಸ್ವದೇಶಕ್ಕೆ ಕಳುಹಿಸಿಕೊಡುವಂತೆ ಭಾರತದ ಒಲಿಂಪಿಕ್ಸ್ ಸಂಸ್ಥೆಗೆ ಸಿಜಿಎಫ್ ತಿಳಿಸಿದೆ. ಈ ಬೆಳವಣಿಗೆಯು ಭಾರತಕ್ಕೆ ತೀವ್ರ ಮುಜುಗರ ತಂದಿದೆ.
ಇರ್ಫಾನ್ ಹಾಗೂ ರಾಕೇಶ್ ಅವರ ಮಾನ್ಯತೆ ಪತ್ರವನ್ನು ರದ್ದುಪಡಿಸಲಾಗಿದ್ದು, ಶುಕ್ರವಾರ ಬೆಳಗ್ಗೆ 9ಕ್ಕೆ ಅವರನ್ನು ಕ್ರೀಡಾಗ್ರಾಮದಿಂದ ಹೊರಕಳುಹಿಸಲಾಗಿದೆ. ಬುಧವಾರ ಈ ಇಬ್ಬರು ಅಥ್ಲೀಟ್‌ಗಳ ಕೊಠಡಿಯಲ್ಲಿ ಬಳಸಲ್ಪಟ್ಟ ಎರಡು ಸಿರಿಂಜ್‌ಗಳು ಪತ್ತೆಯಾಗಿದ್ದು, ಇದು ಸಿಜಿಎಫ್‌ನ ನೋ-ನೀಡಲ್ ಪಾಲಿಸಿಗೆ ವಿರುದ್ಧವಾಗಿದೆ.
ಇಬ್ಬರು ಅಥ್ಲೀಟ್‌ಗಳ ರಕ್ತ ಹಾಗೂ ಮೂತ್ರ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಗುರುವಾರ ಅದನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಇಬ್ಬರು ಉದ್ದೀಪನಾ ಮದ್ದು ನಿಗ್ರಹ ನಿಯಮವನ್ನು ಉಲ್ಲಂಘಿಸಿದ್ದು ಕಂಡು ಬಂದಿಲ್ಲ.
‘‘ಇಬ್ಬರು ಅಥ್ಲೀಟ್‌ಗಳ ವಿರುದ್ಧ ಶಿಸ್ತು ಸಮಿತಿ ವಿಚಾರಣೆ ನಡೆಸಲಿದ್ದು, ಇಬ್ಬರ ವಿರುದ್ಧ ಕಠಿಣ ಕ್ರಮ ಜಾರಿಯಾಗುವ ಸಾಧ್ಯತೆಯಿದೆ’’ಎಂದು ಭಾರತದ ಅಥ್ಲೆಟಿಕ್ಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಸಿ.ಕೆ. ವಾಲ್ಸನ್ ಹೇಳಿದ್ದಾರೆ.
ಗೇಮ್ಸ್ ವಿಲೇಜ್‌ನಲ್ಲಿ ಸಿರಿಂಜ್‌ಗಳನ್ನು ಕೊಂಡೊಯ್ಯಬಾರದು ಎಂದು ಎಚ್ಚರಿಕೆ ನೀಡಿದ ಹೊರತಾಗಿಯೂ ಭಾರತೀಯ ಅಥ್ಲೀಟ್‌ಗಳು ಈ ಎಚ್ಚರಿಕೆಯನ್ನು ಉಲ್ಲಂಘಿಸಿರುವುದು ಇದು ಎರಡನೇ ಬಾರಿ. ಉದ್ಘಾಟನಾ ಸಮಾರಂಭದ ದಿನದಂದೇ ಸಿಜಿಎಫ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಭಾರತದ ಬಾಕ್ಸರ್‌ಗಳಿಗೆ ಛೀಮಾರಿ ಹಾಕಿತ್ತು.
‘‘ಭಾರತ ತಂಡದ ಅಥ್ಲೀಟ್‌ಗಳು ಮತ್ತೊಮ್ಮೆ ನಿಯಮ ಉಲ್ಲಂಘಿಸಿದರೆ, ಆರೋಪಿ ಅಥ್ಲೀಟ್ ಮಾನ್ಯತೆ ಕಾರ್ಡನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಭಾರತದ ಚೀಫ್‌ಡಿ ಮಿಶನ್ ವಿಕ್ರಂಗೆ ನಾವು ತಿಳಿಸಿದ್ದೇವೆ’’ ಎಂದು ಸಿಜಿಎಫ್ ತಿಳಿಸಿದೆ. ಈ ವಾರ ನಡೆದ 20 ಮೀ. ನಡಿಗೆಯಲ್ಲಿ ಇರ್ಫಾನ್ 13ನೇ ಸ್ಥಾನ ಪಡೆದಿದ್ದರು. ತ್ರಿಪಲ್ ಜಂಪ್‌ನ ಅರ್ಹತಾ ಸುತ್ತಿನಲ್ಲಿ 12ನೇ ಸ್ಥಾನ ಪಡೆದಿದ್ದ ರಾಕೇಶ್ ಶುಕ್ರವಾರ ಫೈನಲ್ ಪಂದ್ಯದಲ್ಲಿ ಆಡಬೇಕಾಗಿತ್ತು.
‘‘ಪಾಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಶಿಬಿರದ ವೇಳೆ ನಾವು ಬ್ಯಾಗಿನೊಳಗೆ ಸಿರಿಂಜ್ ಇರಿಸಿದ್ದೆವು. ಆದರೆ, ಅದನ್ನು ಬ್ಯಾಗ್‌ನಿಂದ ತೆಗೆಯಲು ಮರೆತ್ತಿದ್ದೆವು. ಇದು ವಿಟಮಿನ್ ಇಂಜೆಕ್ಷನ್‌ಗಳಾಗಿದ್ದವು’’ ಎಂದು ಇರ್ಫಾನ್, ರಾಕೇಶ್ ಹೇಳಿದ್ದಾರೆ.