ಗಡಿಯಲ್ಲಿ ಪಾಕ್-ಅಫ್ಘಾನಿಸ್ತಾನ ಸೈನಿಕರ ಚಕಮಕಿ
Update: 2018-04-15 23:23 IST
ಕಾಬೂಲ್, ಎ. 15: ಪಾಕಿಸ್ತಾನಿ ಸೈನಿಕರು ಪೂರ್ವ ಅಫ್ಘಾನಿಸ್ತಾನಕ್ಕೆ ನುಗ್ಗಿ ಅಫ್ಘಾನಿಸ್ತಾನದ ಸೈನಿಕರೊಂದಿಗೆ ಸಂಘರ್ಷ ನಡೆಸಿದ್ದಾರೆ ಎಂದು ಅಫ್ಘಾನಿಸ್ತಾನದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚಕಮಕಿ ರವಿವಾರ ಆರಂಭಗೊಂಡಿದ್ದು, ಈಗಲೂ ನಡೆಯುತ್ತಿದೆ ಎಂದು ಪೂರ್ವದ ಖೋಸ್ತ್ ಪ್ರಾಂತದ ಪೊಲೀಸ್ ಮುಖ್ಯಸ್ಥ ಕರ್ನಲ್ ಅಬ್ದುಲ್ ಹನನ್ ಹೇಳಿದ್ದಾರೆ.
ಆದರೆ, ಸಾವು-ನೋವಿನ ಬಗ್ಗೆ ಅವರು ವಿವರಗಳನ್ನು ನೀಡಲಿಲ್ಲ.
ಎರಡು ದೇಶಗಳನ್ನು 2,400 ಕಿಲೋಮೀಟರ್ ಉದ್ದದ ‘ಡುರಾಂಡ್ ರೇಖೆ’ ಬೇರ್ಪಡಿಸುತ್ತದೆ. ಈ ರೇಖೆಯನ್ನು 1896ರಲ್ಲಿ ಬ್ರಿಟಿಶರು ಎಳೆದಿದ್ದರು.
ಇದು ಅಂತಾರಾಷ್ಟ್ರೀಯ ಗಡಿ ಎನ್ನುವುದನ್ನು ಅಫ್ಘಾನಿಸ್ತಾನ ಒಪ್ಪುವುದಿಲ್ಲ ಹಾಗೂ ಇಲ್ಲಿ ಪಾಕಿಸ್ತಾನಿ ಸೈನಿಕರ ಜಮಾವಣೆಗೆ ಅಫ್ಘಾನಿಸ್ತಾನ ಆಕ್ಷೇಪ ವ್ಯಕ್ತಪಡಿಸುತ್ತದೆ.
ದುರ್ಬಲ ಗಡಿ ಭಾಗದಲ್ಲಿ ಭಯೋತ್ಪಾದಕರ ವಿರುದ್ಧ ದಮನ ಕಾರ್ಯಾಚರಣೆ ನಡೆಸುವಲ್ಲಿ ಇನ್ನೊಂದು ದೇಶ ವಿಫಲವಾಗಿದೆ ಎಂಬುದಾಗಿ ಈ ಎರಡೂ ದೇಶಗಳು ಪರಸ್ಪರರ ವಿರುದ್ಧ ಆರೋಪಿಸುತ್ತಿವೆ.