×
Ad

90 ಮೀ. ದೂರಕ್ಕೆ ಜಾವೆಲಿನ್ ಎಸೆಯುವ ಗುರಿ: ನೀರಜ್

Update: 2018-04-18 23:41 IST

ಹೊಸದಿಲ್ಲಿ, ಎ.18: ‘‘ಮುಂಬರುವ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಅವಕಾಶ ಹೆಚ್ಚಿಸಿಕೊಳ್ಳಲು ನಿರಂತರವಾಗಿ 90 ಮೀ.ದೂರಕ್ಕೆ ಜಾವೆಲಿನ್ ಎಸೆಯುವ ಗುರಿ ಹಾಕಿಕೊಂಡಿದ್ದೇನೆ’’ ಎಂದು 21ನೇ ಆವೃತ್ತಿಯ ಕಾಮನ್‌ವೆಲ್ತ್‌ಗೇಮ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿರುವ ಭಾರತದ ಏಕೈಕ ಅಥ್ಲೀಟ್ ನೀರಜ್ ಚೋಪ್ರಾ ಹೇಳಿದ್ದಾರೆ. 2016ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಹರ್ಯಾಣದ 20ರ ಹರೆಯದ ಚೋಪ್ರಾ ಗೋಲ್ಡ್ ಕೋಸ್ಟ್ ನಲ್ಲಿ 86.47 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದುಕೊಂಡಿದ್ದರು. ಟ್ರಾಕ್ ಆ್ಯಂಡ್ ಫೀಲ್ಡ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದರು. ‘‘ಮೂರು ತಿಂಗಳುಗಳಿಂದ ಖ್ಯಾತ ಕೋಚ್ ವೆರ್ನರ್ ಅವರೊಂದಿಗೆ ಜರ್ಮನಿಯಲ್ಲಿ ನಾನು ತರಬೇತಿ ಪಡೆಯುತ್ತಿದ್ದೇನೆ. ನಾನು ತರಬೇತಿಯ ಜೊತೆಗೆ ನಾನು ಸೇವಿಸುವ ಆಹಾರವನ್ನು ತಯಾರಿಸಿಕೊಳ್ಳುತ್ತಿದ್ದೆ. ಈ ಚಿನ್ನದ ಪದಕ ಜಯಿಸಲು ಕಠಿಣ ಶ್ರಮಪಟ್ಟಿದ್ದೇನೆ. ನನ್ನ ಈ ಸಾಧನೆ ದೇಶದ ಜನತೆಗೆ ಪ್ರೇರಣೆಯಾಗುವ ವಿಶ್ವಾಸವಿದೆ’’ ಎಂದು ಇಂಡಿಯನ್ ಆರ್ಮಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚೋಪ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News