ತೈವಾನ್ ಸಂಸತ್‌ನಲ್ಲಿ ಸಂಸದರ ಹೊಡೆದಾಟ

Update: 2018-04-20 16:16 GMT

ತೈಪೆ (ತೈವಾನ್), ಎ. 20: ಮಾಜಿ ಸೈನಿಕರ ಪಿಂಚಣಿ ಮೊತ್ತವನ್ನು ಕಡಿತಗೊಳಿಸುವ ಪ್ರಸ್ತಾಪಕ್ಕೆ ಸಂಬಂಧಿಸಿ ತೈವಾನ್ ಸಂಸದರು ಶುಕ್ರವಾರ ಸಂಸತ್ತಿನಲ್ಲಿ ಹೊಡೆದಾಡಿಕೊಂಡಿದ್ದಾರೆ.

ಈ ತಿಂಗಳ ಆದಿ ಭಾಗದಲ್ಲಿ ತೈವಾನ್ ಸಚಿವ ಸಂಪುಟವು ಇದಕ್ಕೆ ಸಂಬಂಧಿಸಿದ ಕರಡು ಮಸೂದೆಯನ್ನು ಸಿದ್ಧಪಡಿಸಿತ್ತು. ಇಂಥ ಪ್ರಸ್ತಾಪದ ವಿರುದ್ಧ ನಿವೃತ್ತ ಸೈನಿಕರು ಫೆಬ್ರವರಿ ತಿಂಗಳಲ್ಲೇ ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆಯ ವೇಳೆ ಮಾಜಿ ಕರ್ನಲ್ ಒಬ್ಬರು ಗೋಡೆಯೊಂದನ್ನು ಹತ್ತುತ್ತಿದ್ದಾಗ ಬಿದ್ದು ಗಾಯಗೊಂಡಿದ್ದರು ಹಾಗೂ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಮಸೂದೆಯನ್ನು ಶುಕ್ರವಾರ ಸಂಸತ್ತಿನಲ್ಲಿ ಸರಕಾರ ಮಂಡಿಸಿದಾಗ ಆಡಳಿತ ಮತ್ತು ಪ್ರತಿಪಕ್ಷಗಳ ಸಂಸದರು ಹೊಡೆದಾಡಿಕೊಂಡರು.

 ಸಂಸದರು ಪರಸ್ಪರರ ವಿರುದ್ಧ ರೇಗಾಡಿದರು ಹಾಗೂ ಪರಸ್ಪರರನ್ನು ತಳ್ಳಿದರು. ಅಧ್ಯಕ್ಷೆ ತ್ಸಾಯಿ ಇಂಗ್-ವೆನ್ ಮಾಜಿ ಸೈನಿಕರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ಕುವೊಮಿಂಟಂಗ್‌ನ ಸಂಸದರು ಘೋಷಪತ್ರಗಳನ್ನು ಪ್ರದರ್ಶಿಸಿದರು.

ಪ್ರತಿಪಕ್ಷ ಸಂಸದರು ಆಡಳಿತಾರೂಢ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ (ಡಿಪಿಪಿ)ಯ ಸಂಸದರ ಮೇಜುಗಳ ಮೇಲೆ ಹಾರಿ ಅವರೊಂದಿಗೆ ಹೊಯ್‌ಕೈ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News