ಟ್ರಂಪ್‌ರ ‘ನಾಸಾ’ ಅಭ್ಯರ್ಥಿ 1 ಮತದ ಅಂತರದಿಂದ ಪಾಸ್

Update: 2018-04-20 16:56 GMT

ವಾಶಿಂಗ್ಟನ್, ಎ. 20: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನ್ಯಾಶನಲ್ ಏರೊನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ)ನ ಮುಖ್ಯಸ್ಥ ಹುದ್ದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಯ್ಕೆಯನ್ನು ಅಮೆರಿಕದ ಸೆನೆಟ್ ಗುರುವಾರ ತೆಳು ಬಹುಮತದಿಂದ ಅನುಮೋದಿಸಿದೆ.

ಓಕ್ಲಹೋಮದ ಸಂಸದ, ಅಮೆರಿಕ ನೌಕಾಪಡೆಯ ಮಾಜಿ ಅಧಿಕಾರಿ ಹಾಗೂ ಮಾಜಿ ಪೈಲಟ್ ಆಗಿರುವ 42 ವರ್ಷದ ಜಿಮ್ ಬ್ರೈಡನ್‌ಸ್ಟೈನ್ ತಾಂತ್ರಿಕ ಹಿನ್ನೆಲೆ ಹೊಂದಿಲ್ಲ ಎಂಬುದಾಗಿ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವರ ಆಯ್ಕೆಯನ್ನು 50-49 ಅಂತರದಿಂದ ಸೆನೆಟ್ ಅಂಗೀಕರಿಸಿತು. ಅವರು ನಾಸಾದ 13ನೇ ಆಡಳಿತಾಧಿಕಾರಿಯಾಗಲಿದ್ದಾರೆ.

ಬ್ರೈಡನ್‌ಸ್ಟೈನ್‌ರನ್ನು ಟ್ರಂಪ್ 7 ತಿಂಗಳ ಹಿಂದೆ ನಾಸಾ ಆಡಳಿತಾಧಿಕಾರಿಯನ್ನಾಗಿ ಹೆಸರಿಸಿದ್ದರು.

2016ರ ಅಧ್ಯಕ್ಷೀಯ ಚುನಾವಣೆಯ ವೇಳೆ ಬ್ರೈಡನ್‌ಸ್ಟೈನ್, ಟ್ರಂಪ್‌ರ ಪ್ರಬಲ ಬೆಂಬಲಿಗರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News