ಗಡಿ ಸಮೀಪ ಬರದಂತೆ ಫೆಲೆಸ್ತೀನಿಯರಿಗೆ ಇಸ್ರೇಲ್ ಎಚ್ಚರಿಕೆ

Update: 2018-04-20 17:30 GMT

ಗಾಝಾ (ಫೆಲೆಸ್ತೀನ್), ಎ. 20: ಗಡಿ ಬೇಲಿಯತ್ತ ಬರದಂತೆ ಫೆಲೆಸ್ತೀನೀಯರನ್ನು ಎಚ್ಚರಿಸುವ ಪತ್ರಗಳನ್ನು ಇಸ್ರೇಲ್ ಶುಕ್ರವಾರ ಗಾಝಾ ಪಟ್ಟಿಯಲ್ಲಿ ಚೆಲ್ಲಿದೆ.

ಕಳೆದ ತಿಂಗಳಿನಲ್ಲಿ ಪ್ರತಿ ಶುಕ್ರವಾರ ಫೆಲೆಸ್ತೀನಿಯರು ಭಾರೀ ಸಂಖ್ಯೆಯಲ್ಲಿ ಇಸ್ರೇಲ್ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದು, ಈ ಶುಕ್ರವಾರವೂ ಪ್ರತಿಭಟನೆ ನಡೆಯಬಹುದು ಎಂದು ನಿರೀಕ್ಷಿಸಿ ಇಸ್ರೇಲ್ ಈ ಎಚ್ಚರಿಕೆ ಹೊರಡಿಸಿದೆ.

ಈ ಪ್ರತಿಭಟನೆಗಳ ವೇಳೆ ಇಸ್ರೇಲ್ ಸೈನಿಕರು ನಡೆಸಿರುವ ಗೋಲಿಬಾರಿನಲ್ಲಿ 31 ಫೆಲೆಸ್ತೀನಿಯರು ಹತರಾಗಿದ್ದಾರೆ ಹಾಗೂ ನೂರಾರು ಮಂದಿ ಗಾಯಗೊಂಡಿದ್ದಾರೆ.

ಪ್ರತಿಭಟನೆಯ ವೇಳೆ ಫೆಲೆಸ್ತೀನಿಯರು ಗಡಿ ಭಾಗದತ್ತ ಕಲ್ಲುಗಳು ಮತ್ತು ಉರಿಯುವ ಟಯರ್‌ಗಳನ್ನು ಎಸೆಯುತ್ತಿದ್ದರು.

ಗಡಿ ಬೇಲಿಯ ತುಂಬಾ ಸಮೀಪಕ್ಕೆ ಬರುವ ಫೆಲೆಸ್ತೀನಿಯರ ಮೇಲೆ ಇಸ್ರೇಲಿ ಪಡೆಗಳು ಗುಂಡು ಹಾರಿಸಿವೆ. ಇಸ್ರೇಲ್ ಪಡೆಗಳ ಈ ಕ್ರಮಕ್ಕೆ ಅಂತರ್ ರಾಷ್ಟ್ರೀಯ ಟೀಕೆ ವ್ಯಕ್ತವಾಗಿದೆ.

ಇತ್ತೀಚಿನ ಹಿಂಸಾಚಾರದ ವೇಳೆ, ಎಚ್ಚರಿಕೆ ನೀಡುವ ಚೀಟಿಗಳನ್ನು ಇಸ್ರೇಲ್ ಉದುರಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಇಸ್ರೇಲ್ ಸೈನಿಕರ ಗುಂಡಿಗೆ 2 ಫೆಲೆಸ್ತೀನಿಯರು ಬಲಿ

ಉತ್ತರ ಗಾಝಾ ಪಟ್ಟಿಯಲ್ಲಿ ಶುಕ್ರವಾರ ಇಸ್ರೇಲಿ ಪಡೆಗಳು ಇಬ್ಬರು ಫೆಲೆಸ್ತೀನಿಯರನ್ನು ಗುಂಡು ಹಾರಿಸಿ ಕೊಂದವು ಎಂದು ವೈದ್ಯಕೀಯ ಮೂಲಗಳು ಹೇಳಿವೆ.

 ಬಲವಂತಕ್ಕೊಳಗಾಗಿ ಇಸ್ರೇಲ್ ತೊರೆದ ಫೆಲೆಸ್ತೀನಿಯರಿಗೆ ತಮ್ಮ ಮೂಲ ಮನೆಗೆ ಮರಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಗಾಝಾ-ಇಸ್ರೇಲ್ ಗಡಿಯಲ್ಲಿ ನಾಲ್ಕು ವಾರಗಳಿಂದ ಫೆಲೆಸ್ತೀನಿಯರು ಪ್ರತಿಭಟನಾ ಪ್ರದರ್ಶನ ನಡೆಸುತ್ತಿದ್ದಾರೆ.

ಇಸ್ರೇಲ್ ಜೊತೆಗಿನ ಗಡಿ ಸಮೀಪ ಟಯರ್‌ಗೆ ಬೆಂಕಿ ಹಚ್ಚುತ್ತಿದ್ದ ಪ್ರತಿಭಟನಾಕಾರರ ಮೇಲೆ ಇಸ್ರೇಲ್ ಸೈನಿಕರು ಗುಂಡು ಹಾರಿಸಿದಾಗ ಈ ಸಾವುಗಳು ಸಂಭವಿಸಿವೆ.

ಇದರೊಂದಿಗೆ, ಮಾರ್ಚ್ 30ರಿಂದ ಇಸ್ರೇಲ್ ಗಡಿಯಲ್ಲಿ ಫೆಲೆಸ್ತೀನಿಯರು ನಡೆಸುತ್ತಿರುವ ಪ್ರತಿಭಟನೆಗಳ ವೇಳೆ ಇಸ್ರೇಲ್ ಸೈನಿಕರು ನಡೆಸಿದ ಗೋಲಿಬಾರಿನಲ್ಲಿ ಮೃತರ ಸಂಖ್ಯೆ 36ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News