ಇಂಡೋನೇಶ್ಯಕ್ಕೆ ಬಂದಿಳಿದ 80 ರೊಹಿಂಗ್ಯಾ ಮುಸ್ಲಿಮರು

Update: 2018-04-20 17:33 GMT

ಬಾಂಡಾ ಅಸೆಹ್ (ಇಂಡೋನೇಶ್ಯ), ಎ. 20: ಸುಮಾರು 80 ರೊಹಿಂಗ್ಯಾ ಮುಸ್ಲಿಮರು ಮರದ ದೋಣಿಯೊಂದರಲ್ಲಿ ಶುಕ್ರವಾರ ಇಂಡೋನೇಶ್ಯ ತಲುಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಮಾತ್ರ ದ್ವೀಪದ ಅಸೆಹ್ ಪ್ರಾಂತದಲ್ಲಿ ರೊಹಿಂಗ್ಯಾರ ಈ ಗುಂಪು ಪಾದಾರ್ಪಣೆ ಮಾಡಿತು.

ಕೆಲವು ವಾರಗಳ ಮೊದಲು ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ಡಝನ್‌ಗಟ್ಟಳೆ ರೊಹಿಂಗ್ಯಾ ಮುಸ್ಲಿಮರು ನೆರೆಯ ಮಲೇಶ್ಯಕ್ಕೆ ಹೋಗಿದ್ದರು.

ಇಂಡೋನೇಶ್ಯ ತಲುಪಿದ ಎಲ್ಲ ರೊಹಿಂಗ್ಯಾ ಮುಸ್ಲಿಮರು ಉತ್ತಮ ಆರೋಗ್ಯ ಸ್ಥಿತಿ ಹೊಂದಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ರಿಝಾ ಯುಲಿಯಾಂಟೊ ತಿಳಿಸಿದರು.

ಅವರು ಸಮುದ್ರದಲ್ಲಿ ಎಷ್ಟು ದಿನ ಇದ್ದರು ಎನ್ನುವುದು ತಿಳಿದಿಲ್ಲ ಎಂದು ಅವರು ನುಡಿದರು.

‘‘ಅವರಲ್ಲಿ ಕೆಲವು ಮಕ್ಕಳು. ಅವರೆಲ್ಲರೂ ಕ್ಷೇಮವಾಗಿದ್ದಾರೆ. ದೇವರಿಗೆ ಧನ್ಯವಾದಗಳು’’ ಎಂದರು.

‘‘ನಾವು ಅವರಿಗೆ ಆಹಾರ ನೀಡಿದ್ದೇವೆ ಹಾಗೂ ಅವರ ಆರೋಗ್ಯವನ್ನು ನಾವು ಕೂಲಂಕಷವಾಗಿ ತಪಾಸಣೆ ನಡೆಸುತ್ತಿದ್ದೇವೆ’’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಮಾನವ ಸಾಗಾಣೆದಾರರ ವಿರುದ್ಧ ಥಾಯ್ಲೆಂಡ್ ಅಧಿಕಾರಿಗಳು 2015ರಿಂದ ಕಾರ್ಯಾಚರಣೆ ನಡೆಸುತ್ತಿರುವುದರಿಂದ ರೊಹಿಂಗ್ಯಾ ವಲಸಿಗರು ಸಮುದ್ರ ಮಾರ್ಗದಲ್ಲಿ ದಕ್ಷಿಣಕ್ಕೆ ತೆರಳುವುದು ವಿರಳವಾಗಿದೆ.

ಆದರೆ, ಬೌದ್ಧ ಬಾಹುಳ್ಯದ ಮ್ಯಾನ್ಮಾರ್‌ನಲ್ಲಿ ಕಳೆದ ವರ್ಷ ಸೇನೆಯು ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ದಮನ ಕಾರ್ಯಾಚರಣೆ ನಡೆಸಿದ ಬಳಿಕ, ಹತಾಶಗೊಂಡಿರುವ ರೊಹಿಂಗ್ಯಾ ಮುಸ್ಲಿಮರು ಮತ್ತೆ ಆಳ ಸಮುದ್ರ ಪ್ರಯಾಣ ಕೈಗೊಳ್ಳಬಹುದು ಎನ್ನುವ ಭೀತಿ ಎದುರಾಗಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ನಲ್ಲಿ ಹಿಂಸಾಚಾರ ಸ್ಫೋಟಿಸಿದಂದಿನಿಂದ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಆಶ್ರಯ ಕೋರಿ ಬಂದವರನ್ನು ಸ್ವಾಗತಿಸುವ ಇಂಡೋನೇಶ್ಯ

2015ರಲ್ಲಿ ನೂರಾರು ರೊಹಿಂಗ್ಯಾ ಮುಸ್ಲಿಮರು ಅಸೆಹ್‌ಗೆ ಬಂದಿದ್ದರು. ಅಲ್ಲಿ ಅವರನ್ನು ಸ್ಥಳೀಯ ಸರಕಾರವು ಸ್ವಾಗತಿಸಿತ್ತು.

ಇಂಡೋನೇಶ್ಯವು ಆಶ್ರಯ ಕೋರಿ ಬಂದವರನ್ನು ಸ್ವೀಕರಿಸುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅವರು ಕೆಲಸ ಮಾಡುವುದನ್ನು ನಿಷೇಧಿಸಿದೆ. ನಿರಾಶ್ರಿತರು ವಲಸೆ ಕೇಂದ್ರಗಳಲ್ಲಿ ವರ್ಷಗಟ್ಟಳೆ ಇರಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News