ಸಿಒಎ-ಬಿಸಿಸಿಐ ತಿಕ್ಕಾಟ : ಮೇ 1ರಂದು ಸುಪ್ರೀಂ ವಿಚಾರಣೆ

Update: 2018-04-28 14:33 GMT

ಮುಂಬೈ, ಎ.28: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಆಡಳಿತ ನಿರ್ವಹಣೆಗೆ ಸುಪ್ರೀಂಕೋರ್ಟ್ ನೇಮಿಸಿದ ಆಡಳಿತಗಾರರ ಸಮಿತಿ(ಸಿಒಎ) ಹಾಗೂ ಬಿಸಿಸಿಐ ಪದಾಧಿಕಾರಿಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಮುಂದುವರಿದಿರುವಂತೆಯೇ, ಸಿಒಎ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೇ 1ರಂದು ನಡೆಸಲಿದೆ.

ಬಿಸಿಸಿಐ ಪದಾಧಿಕಾರಿಗಳ ಹುದ್ದೆಗೆ ಹೊಸದಾಗಿ ಚುನಾವಣೆ ನಡೆಯಬೇಕೆಂದು ಇಬ್ಬರು ಸದಸ್ಯರುಳ್ಳ ಸಿಒಎ ಶಿಫಾರಸು ಮಾಡಿದೆ. ಅಲ್ಲದೆ ಬಿಸಿಸಿಐಗೆ ಹೊಸ ಸಂವಿಧಾನವನ್ನು ಅಂಗೀಕರಿಸದೆಯೂ ವಾರ್ಷಿಕ ಮಹಾಸಭೆಯನ್ನು ನಡೆಸಲು ನಿರ್ದೇಶನ ನೀಡಬೇಕೆಂದು ಸಿಇಒ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿಕೊಂಡಿದೆ. ಬಿಸಿಸಿಐಯ ಸಂವಿಧಾನದ ಪ್ರಕಾರ ಉಸ್ತುವಾರಿ ಅಧ್ಯಕ್ಷ ಸಿ.ಕೆ.ಖನ್ನಾ ಹಾಗೂ ಉಸ್ತುವಾರಿ ಕಾರ್ಯದರ್ಶಿ ಅಮಿತಾಬ್ ಚೌಧರಿ, ಖಜಾಂಚಿ ಅನಿರುದ್ಧ ಚೌಧರಿಯವರ ಕಾರ್ಯಾವಧಿ ಮುಕ್ತಾಯಗೊಂಡಿದ್ದು, ಇವರನ್ನು ತಕ್ಷಣ ಹುದ್ದೆಯಿಂದ ಮುಕ್ತಗೊಳಿಸಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂದು ಸಿಒಎ ಸದಸ್ಯರಾದ ವಿನೋದ್ ರಾಜ್ ಹಾಗೂ ಡಯಾನ ಎಡುಲ್ಜಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಒತ್ತಾಯಿಸಿದ್ದಾರೆ.

ಈ ಅರ್ಜಿಯ ವಿಚಾರಣೆಯನ್ನು ಮೇ 1ರಂದು ಸುಪ್ರೀಂಕೋರ್ಟ್ ನಡೆಸಲಿದೆ. ಅಲ್ಲದೆ ಲೋಧಾ ಸಮಿತಿ ಸೂಚಿಸಿದ ತಿದ್ದುಪಡಿಯಂತೆ ಬಿಸಿಸಿಐಗೆ ಹೊಸ ಸಂವಿಧಾನ ರೂಪಿಸದಿದ್ದರೂ ವಾರ್ಷಿಕ ಮಹಾಸಭೆ ಕರೆಯಲು ನಿರ್ದೇಶನ ನೀಡಬೇಕೆಂದು ಸಿಒಎ ಸುಪ್ರೀಂಗೆ ಮನವಿ ಸಲ್ಲಿಸಿದೆ. ಸಿಒಎಯ ಸದಸ್ಯರಾಗಿದ್ದ ರಾಮಚಂದ್ರ ಗುಹಾ ಹಾಗೂ ವಿಕ್ರಂ ಲಿಮಯೆ ಪದತ್ಯಾಗ ಮಾಡಿರುವ ಕಾರಣ ಖಾಲಿ ಇರುವ ಎರಡು ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News