×
Ad

ಬೆಲ್‌ಗ್ರೇಡ್ ಬಾಕ್ಸಿಂಗ್ ಟೂರ್ನಿ: ಭಾರತದ ಸುಮಿತ್, ನಿಖಾತ್ ಝರೀನ್ ಗೆ ಚಿನ್ನ

Update: 2018-04-29 20:47 IST

ಹೊಸದಿಲ್ಲಿ, ಎ.29: ಸರ್ಬಿಯಾದಲ್ಲಿ ನಡೆದ 56ನೇ ಬೆಲ್‌ಗ್ರೇಡ್ ಅಂತರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸುಮಿತ್ ಸಂಗ್ವಾನ್(91 ಕಿ.ಗ್ರಾಂ.ವಿಭಾಗ) ಹಾಗೂ ನಿಖಾತ್ ಝರೀನ್ (51 ಕಿ.ಗ್ರಾಂ. ವಿಭಾಗ) ಚಿನ್ನದ ಪದಕ ಗೆದ್ದಿದ್ದಾರೆ.

ಏಶಿಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಮಿತ್ ಬಳಿಕ ಗಾಯಾಳುವಾದ ಕಾರಣ ಹಲವು ಸಮಯ ಕಣದಿಂದ ದೂರವಿದ್ದರು. ನಂತರ ಕಾಮನ್‌ವೆಲ್ತ್ ಕ್ರೀಡಾಕೂಟದ ಆಯ್ಕೆ ಪಂದ್ಯದಲ್ಲಿ ನಿರೀಕ್ಷಿತ ಸಾಧನೆ ತೋರಲು ವಿಫಲರಾಗಿದ್ದರು. ಇದೀಗ ತಮ್ಮ ವಾಪಸಾತಿಯನ್ನು ಚಿನ್ನದ ಪದಕ ಗೆಲ್ಲುವ ಮೂಲಕ ಆಚರಿಸಿಕೊಂಡಿರುವ ಸುಮಿತ್ ಅಂತಿಮ ಹಣಾಹಣಿಯಲ್ಲಿ ಇಕ್ವಡೋರ್‌ನ ಕ್ಯಾಸ್ಟಿಲೊ ಟಾರೆಸ್‌ರನ್ನು 5-0 ಅಂತರದಿಂದ ಭರ್ಜರಿಯಾಗಿ ಸೋಲಿಸಿದರು. ಸುಮಿತ್ ತಮ್ಮ ಗೆಲುವಿನ ಶ್ರೇಯವನ್ನು ತಂದೆ ಸುರೇಂದರ್ ಸಂಗ್ವಾನ್‌ಗೆ ಅರ್ಪಿಸಿದ್ದಾರೆ.

ಮಹಿಳೆಯರ ವಿಭಾಗದ 51 ಕಿ.ಗ್ರಾಂ. ವಿಭಾಗದಲ್ಲಿ ಮಾಜಿ ವಿಶ್ವ ಜ್ಯೂನಿಯರ್ ಚಾಂಪಿಯನ್ ನಿಖಾತ್ ಝರೀನ್ ಗ್ರೀಸ್‌ನ ಕುಟ್ಸೋರ್ಗ್‌ಒಪುಲೊ ಐಕಟರಿನಿ ಎದುರು 5-0 ಅಂತರದ ಜಯ ಸಾಧಿಸಿದರು. ಝರೀನ್ ಕೂಡಾ ಭುಜದ ಗಾಯದಿಂದ ಚೇತರಿಸಿಕೊಂಡು ಕಣಕ್ಕೆ ಇಳಿದಿದ್ದಾರೆ.

ಪುರುಷರ ವಿಭಾಗದ 49 ಕಿ.ಗ್ರಾಂ. ವಿಭಾಗದ ತಮ್ಮ ಅಂತಿಮ ಪಂದ್ಯದಲ್ಲಿ ಅಲ್ಜೀರಿಯಾದ ಮುಹಮ್ಮದ್ ಟೊರೆಗ್‌ರನ್ನು 5-0 ಅಂತರದಿಂದ ಮಣಿಸಿದ ಭಾರತದ ಹಿಮಾಂಶು ಶರ್ಮ ಕಂಚಿನ ಪದಕ ಗೆದ್ದರು. ಪುರುಷರ ವಿಭಾಗದಲ್ಲಿ ಲಾಲ್ದಿನ್‌ಮವಿಯ (52 ಕಿ.ಗ್ರಾಂ), ವರೀಂದರ್ ಸಿಂಗ್(56 ಕಿ.ಗ್ರಾಂ) ಹಾಗೂ ಪವನ್ ಕುಮಾರ್ (69 ಕಿ.ಗ್ರಾಂ) ಬೆಳ್ಳಿ ಗೆದ್ದರೆ, ನರೇಂದರ್ (91 ಕಿ.ಗ್ರಾಂ) ಕಂಚು ಗೆದ್ದರು. ಮಹಿಳೆಯರ ವಿಭಾಗದಲ್ಲಿ ಪ್ರಿಯಾಂಕಾ ಠಾಕುರ್ (60 ಕಿ.ಗ್ರಾಂ), ರೂಮಿ ಗೊಗೋಯ್ (75 ಕಿ.ಗ್ರಾಂ) ಹಾಗೂ ನಿರ್ಮಲಾ ರಾವತ್ (81 ಕಿ.ಗ್ರಾಂ. ವಿಭಾಗ) ಕಂಚಿನ ಪದಕ ಗೆದ್ದಿದ್ದಾರೆ.

ಟೂರ್ನಿಯಲ್ಲಿ ಭಾರತ ಮೂರು ಚಿನ್ನ, ಐದು ಬೆಳ್ಳಿ ಹಾಗೂ ಐದು ಕಂಚಿನ ಪದಕ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News