ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ?!
ವಾಶಿಂಗ್ಟನ್, ಎ. 30: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಜೊತೆಗೆ ತಾನು ನಡೆಸಲಿರುವ ಪರಮಾಣು ಮಾತುಕತೆಗಳ ಪರಿಣಾಮಗಳ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಮಾತುಕತೆಯ ಯಶಸ್ಸು ತನಗೆ ಸೇರಬೇಕು ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನು ಅವರ ಬೆಂಬಲಿಗರು ಒಪ್ಪಿದ್ದಾರೆ ಹಾಗೂ ಶನಿವಾರ ರಾತ್ರಿ ಮಿಶಿಗನ್‌ನಲ್ಲಿ ನಡೆದ ಸಭೆಯೊಂದರಲ್ಲಿ, ಟ್ರಂಪ್‌ಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೊರಿಯ ಮಾತುಕತೆಗಳಲ್ಲಿ ತಾನು ವಹಿಸಿದ ಪಾತ್ರದ ಬಗ್ಗೆ ಟ್ರಂಪ್ ಸಭೆಗೆ ತಾಜಾ ವಿವರಗಳನ್ನು ನೀಡುತ್ತಿದ್ದಂತೆಯೇ, ಮಧ್ಯ ಪ್ರವೇಶಿಸಿದ ಪ್ರೇಕ್ಷಕರು, ‘‘ನೊಬೆಲ್!! ನೊಬೆಲ್!! ನೊಬೆಲ್!!’’ ಎಂಬುದಾಗಿ ಕೂಗಿದರು.
ಇದರಿಂದ ಆನಂದತುಂದಿಲರಾದ ಟ್ರಂಪ್, ತನ್ನಷ್ಟಕ್ಕೆ ನಗುತ್ತಾ, ‘‘ನೊಬೆಲ್’’ ಎಂದು ಉದ್ಗರಿಸಿದರು.
‘‘ನೊಬೆಲ್... ನೊಬೆಲ್’’ ಎಂಬ ಜನರ ಘೋಷಣೆಗಳು ಮುಗಿಯುವವರೆಗೂ ತಾಳ್ಮೆಯಿಂದ ಕಾದರು.
‘‘ತುಂಬಾ ಒಳ್ಳೆಯ ವಿಷಯ, ಧನ್ಯವಾದಗಳು. ‘ನೊಬೆಲ್’ ಒಳ್ಳೆಯ ಸಂಗತಿ’’ ಎಂದು ಹೇಳುತ್ತಾ ಮತ್ತೊಮ್ಮೆ ನಕ್ಕರು.
ನೊಬೆಲ್ ಕಲ್ಪನೆ ಹಾಸ್ಯಾಸ್ಪದವೆಂದು ನಕ್ಕರೋ, ಅಥವಾ ರೋಮಾಂಚನಗೊಂಡು ನಕ್ಕರೋ ಎನ್ನುವುದು ಸ್ಪಷ್ಟವಾಗಲಿಲ್ಲ!