ರೊಹಿಂಗ್ಯಾ ಬಿಕ್ಕಟ್ಟು ಪರಿಹಾರ: ಭಾರತ, ಚೀನಾ ನೆರವು ಕೋರಿದ ಹಸೀನಾ
ಢಾಕಾ (ಬಾಂಗ್ಲಾದೇಶ), ಎ. 30: ರೊಹಿಂಗ್ಯಾ ಬಿಕ್ಕಟ್ಟು ಬಗೆಹರಿಸುವ ತನ್ನ ಪ್ರಯತ್ನದಲ್ಲಿ ಬಾಂಗ್ಲಾದೇಶಕ್ಕೆ ಹೆಚ್ಚಿನ ಬೆಂಬಲ ನೀಡುವಂತೆ ಆ ದೇಶದ ಪ್ರಧಾನಿ ಶೇಖ್ ಹಸೀನಾ ಸೋಮವಾರ ಭಾರತ, ಚೀನಾ, ರಶ್ಯ ಮತ್ತು ಜಪಾನ್‌ಗಳನ್ನು ಒತ್ತಾಯಿಸಿದ್ದಾರೆ.
‘‘ರೊಹಿಂಗ್ಯಾ ಬಿಕ್ಕಟ್ಟು ಪರಿಹಾರದಲ್ಲಿ ಭಾರತ, ಚೀನಾ, ರಶ್ಯ ಮತ್ತು ಜಪಾನ್ ಮಹತ್ವದ ಪಾತ್ರಗಳನ್ನು ವಹಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ’’ ಎಂದು ಹಸೀನಾ ಹೇಳಿದರು.
ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ರೊಹಿಂಗ್ಯಾ ಮುಸ್ಲಿಮರ ಸ್ಥಿತಿಗತಿ ಅಧ್ಯಯನಕ್ಕಾಗಿ ಭೇಟಿ ನೀಡಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಯೋಗದ ಜೊತೆ ಮಾತನಾಡಿದ ವೇಳೆ ಹಸೀನಾ ಈ ಬೇಡಿಕೆ ಮುಂದಿಟ್ಟಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಯೋಗದ ನೇತೃತ್ವವನ್ನು ಮಂಡಳಿಯ ಅಧ್ಯಕ್ಷ ಗುಸ್ತಾವೊ ಮೇಝ ಕಾಡ್ರ ವಹಿಸಿದ್ದರು.
ರೊಹಿಂಗ್ಯಾ ಬಿಕ್ಕಟ್ಟಿನ ವಿಷಯದಲ್ಲಿ ಮ್ಯಾನ್ಮಾರ್ ಮೇಲೆ ಒತ್ತಡ ಹೇರುವಂತೆ ಅವರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆನೀಡಿದರು. ಈ ವಿಷಯದ ಬಗ್ಗೆ ಭಾರತ, ಚೀನಾ, ಥಾಯ್ಲೆಂಡ್, ಲಾವೋಸ್ ಮತ್ತು ಮ್ಯಾನ್ಮಾರ್‌ನ ಇತರ ನೆರೆಯ ದೇಶಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಹೇಳಿದರು ಎಂದು ‘ಬಿಡಿನ್ಯೂಸ್24.ಕಾಮ್’ ವರದಿ ಮಾಡಿದೆ.