ಸಾಯುವುದಕ್ಕಾಗಿ ಸ್ವಿಟ್ಸರ್‌ಲ್ಯಾಂಡ್‌ಗೆ ಹೋಗಲಿದ್ದಾರೆ ಈ ಹಿರಿಯ ವಿಜ್ಞಾನಿ
ಸಿಡ್ನಿ, ಎ. 30: ಆಸ್ಟ್ರೇಲಿಯದ ಅತಿ ಹಿರಿಯ ವಿಜ್ಞಾನಿ 104 ವರ್ಷದ ಡೇವಿಡ್ ಗುಡಾಲ್ ತನ್ನ ಬದುಕನ್ನು ಮುಗಿಸುವುದಕ್ಕಾಗಿ ಮೇ ತಿಂಗಳ ಮೊದಲ ಭಾಗದಲ್ಲಿ ಸ್ವಿಟ್ಸರ್‌ಲ್ಯಾಂಡ್‌ಗೆ ತೆರಳಲಿದ್ದಾರೆ.
ಅವರನ್ನು ಗುಣಪಡಿಸಲಾಗದ ಕಾಯಿಲೆಯೇನೂ ಬಾಧಿಸುತ್ತಿಲ್ಲ. ಆದರೆ, ಅವರ ಜೀವನದ ಗುಣಮಟ್ಟ ಕುಸಿದಿದೆ. ಹಾಗಾಗಿ, ಜೀವನವನ್ನು ಕೊನೆಗೊಳಿಸಲು ಸ್ವಿಟ್ಸರ್‌ಲ್ಯಾಂಡ್‌ನ ಬಸೆಲ್‌ನಲ್ಲಿರುವ ಸಾಯಲು ನೆರವು ನೀಡುವ ಸಂಸ್ಥೆಯೊಂದರ ನೆರವು ಕೋರಿದ್ದಾರೆ.
‘‘ಈ ವಯಸ್ಸನ್ನು ತಲುಪಿರುವುದಕ್ಕೆ ನಾನು ವಿಷಾದಿಸುತ್ತೇನೆ’’ ಎಂದು ಈ ತಿಂಗಳ ಆದಿ ಭಾಗದಲ್ಲಿ ತನ್ನ ಹುಟ್ಟು ಹಬ್ಬದ ದಿನದಂದು ‘ಎಬಿಸಿ’ ಟಿವಿಯೊಂದಿಗೆ ಮಾತನಾಡಿದ ಅವರು ಹೇಳಿದ್ದರು.
‘‘ನಾನು ಸಂತೋಷವಾಗಿಲ್ಲ. ನಾನು ಸಾಯಲು ಬಯಸಿದ್ದೇನೆ. ಆದರೆ, ಇದೇನೂ ಬೇಸರದ ವಿಷಯವಲ್ಲ. ಬೇಸರದ ವಿಷಯವೆಂದರೆ, ಸಾಯುವುದರಿಂದ ಜನರನ್ನು ತಡೆಯುವುದು. ನನ್ನಂಥ ವೃದ್ಧ ವ್ಯಕ್ತಿ ಆತ್ಮಹತ್ಯೆಗೆ ಸಹಾಯ ಪಡೆಯುವ ಹಕ್ಕು ಸೇರಿದಂತೆ ಪೂರ್ಣ ಪೌರತ್ವ ಹಕ್ಕುಗಳನ್ನು ಹೊಂದಬೇಕು ಎನ್ನುವುದು ನನ್ನ ತರ್ಕವಾಗಿದೆ’’ ಎಂದಿದ್ದರು.
ಆಸ್ಟ್ರೇಲಿಯದಲ್ಲಿ ದಯಾಮರಣ ನಿಷಿದ್ಧವಾಗಿರುವುದರಿಂದ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.
ಇತ್ತೀಚಿನವರೆಗೂ ಕೆಲಸದಲ್ಲಿ ಸಕ್ರಿಯ
ಡೇವಿಡ್ ಗುಡಾಲ್ ಪರ್ತ್‌ನ ಎಡಿತ್ ಕೋವನ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಇತ್ತೀಚಿನವರೆಗೂ ತನ್ನ ಕೆಲಸದಲ್ಲಿ ಸಕ್ರಿಯರಾಗಿದ್ದರು.
2016ರಲ್ಲಿ ನಡೆದ ಘಟನೆಯೊಂದು ಜಾಗತಿಕ ಗಮನವನ್ನು ಸೆಳೆದಿತ್ತು. ತನ್ನ 102ನೆ ವರ್ಷದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಲು ಗುಡಾಲ್ ಅನರ್ಹರಾಗಿದ್ದಾರೆ ಎಂಬುದಾಗಿ ಆಡಳಿತ ಮಂಡಳಿ ಘೋಷಿಸಿತು.
ಇದನ್ನು ಗುಡಾಲ್ ವಿರೋಧಿಸಿದರು. ಇದೊಂದು ದೊಡ್ಡ ವಿವಾದವಾಗಿ ಪರಿಣಮಿಸಿತು ಹಾಗೂ ಜಾಗತಿಕ ವಿಜ್ಞಾನಿಗಳ ಸಮುದಾಯ ಅವರನ್ನು ಬೆಂಬಲಿಸಿತು.
ಅಂತಿಮವಾಗಿ ವಿಶ್ವವಿದ್ಯಾನಿಲಯ ತನ್ನ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿತು.
ಅವರು ಡಝನ್‌ಗಟ್ಟಲೆ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಿದ್ದಾರೆ. ಇತ್ತೀಚಿನವರೆಗೂ ಪರಿಸರಕ್ಕೆ ಸಂಬಂಧಿಸಿದ ಪತ್ರಿಕೆಗಳನ್ನು ವಿಮರ್ಶಿಸಿದ್ದಾರೆ ಹಾಗೂ ಸಂಪಾದಿಸಿದ್ದಾರೆ.