ನ್ಯೂಯಾರ್ಕ್ ನಲ್ಲಿ ಮನೆಗೆ ಬೆಂಕಿ: ಭಾರತ ಮೂಲದ ಮೂವರ ಸಾವು

Update: 2018-04-30 18:22 GMT

ನ್ಯೂಯಾರ್ಕ್, ಎ. 30: ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಬೆಂಕಿ ಅಪಘಾತದಲ್ಲಿ ಓರ್ವ ಭಾರತ ಮೂಲದ ಮಹಿಳೆ ಹಾಗೂ ಅವರ ಅಜ್ಜ ಮತ್ತು ಅಜ್ಜಿ ಮೃತಪಟ್ಟಿದ್ದಾರೆ ಹಾಗೂ ಮಹಿಳೆಯ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

ಶನಿವಾರ ತಡರಾತ್ರಿ ನಡೆದ ದುರಂತದಲ್ಲಿ ಹರ್ಲೀನ್ ಮಾಗೊ, ಅವರ ಅಜ್ಜಿ ರಗ್ವೀರ್ ಕೌರ್ ಕೈಂತ್ (82) ಮತ್ತು ಅಜ್ಜ ಪ್ಯಾರ ಕೈಂತ್ (87) ಅಸು ನೀಗಿದ್ದಾರೆ.

ಮಾಗೊ ಅವರ 8 ವರ್ಷದ ಮಗಳು ಮತ್ತು 6 ವರ್ಷದ ಮಗ ಗಾಯಗೊಂಡಿದ್ದಾರೆ. ಕಟ್ಟಡ ಸುಡುತ್ತಿರುವಾಗ ಮಕ್ಕಳು ಅದರ ಒಳಗೆ ಬಂಧಿಯಾಗಿದ್ದರು.

ಅಗ್ನಿಶಾಮಕ ಸಿಬ್ಬಂದಿ ಇಬ್ಬರೂ ಮಕ್ಕಳನ್ನು ರಕ್ಷಿಸಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಾಲಕಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಹಾಗೂ ಬಾಲಕನ ಸ್ಥಿತಿ ಸ್ಥಿರವಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ಮನೆಯೊಳಗಿದ್ದ ಇತರ ಏಳು ಮಂದಿಯನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆಯಾದರೂ, ಜೀವಕ್ಕೆ ಅಪಾಯವಿಲ್ಲ ಎಂದು ನ್ಯೂಯಾರ್ಕ್ ನಗರ ಅಗ್ನಿಶಾಮಕ ಇಲಾಖೆ ವರದಿಯೊಂದರಲ್ಲಿ ತಿಳಿಸಿದೆ.

ಸಂಬಂಧಿಯೊಬ್ಬರ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಮಾಗೊ ತನ್ನ ಅಜ್ಜ-ಅಜ್ಜಿ ಮನೆಗೆ ಹೋಗಿದ್ದರು ಎಂದು ಅವರ ಸಂಬಂಧಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News