ಒಲಿಂಪಿಕ್ಸ್ ಪದಕದ ಮೇಲೆ ಕಣ್ಣಿಟ್ಟಿರುವ ನೀರಜ್‌ಚೋಪ್ರಾ
ಮುಂಬೈ, ಎ.30: ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೀಡಿರುವ ಪ್ರದರ್ಶನ ಆತ್ಮವಿಶ್ವಾಸ ತುಂಬಿದೆ. ಟೋಕಿಯೊದಲ್ಲಿ ನಡೆಯಲಿರುವ ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದು ಕೊಡುವ ವಿಶ್ವಾಸದಲ್ಲಿದ್ದಾರೆ. ಒಲಿಂಪಿಕ್ಸ್ ತಯಾರಿಗೆ ಇನ್ನೂ 2 ವರ್ಷಗಳ ಕಾಲಾವಕಾಶ ಇದೆ. ಹೀಗಾಗಿ ಒಲಿಂಪಿಕ್ಸ್ ಪದಕ ಗೆಲ್ಲುವುದಕ್ಕಾಗಿ ತಯಾರಿ ಆರಂಭಿಸಿದ್ದಾರೆ.
ಭಾರತ ಸ್ವಾತಂತ್ರಪೂರ್ವದಲ್ಲಿ ಟ್ರಾಕ್ ಆ್ಯಂಡ್ ಫೀಲ್ಡ್ ಸ್ಪರ್ಧೆಯಲ್ಲಿ ಪದಕ ಜಯಿಸಿತ್ತು. ನಾರ್ಮನ್ ಪ್ರಿಚರ್ಡ್ ಎಂಬ ಆಂಗ್ಲೋ ಇಂಡಿಯನ್ 100 ಮೀಟರ್ ಓಟದಲ್ಲಿ ಎರಡನೇ ಸ್ಥಾನದೊಂದಿಗೆ ರಜತ ಪದಕ ಪಡೆದಿದ್ದರು. ಆ ಬಳಿಕ ಯಾರಿಗೂ ಈ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.
ಗೋಲ್ಡ್‌ಕೋಸ್ಟ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಜಾವೆಲಿನ್‌ನಲ್ಲಿ 20ರ ಹರೆಯದ ನೀರಜ್ ಚೋಪ್ರಾ ಚಿನ್ನ ಗೆದ್ದುಕೊಂಡಿದ್ದರು.
ಮಾಜಿ ವರ್ಲ್ಡ್ ಜೂನಿಯರ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಕಾಮನ್‌ವೆಲ್ತ್ ಗೇಮ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಜಯಿಸಿದ ಮೂರನೇ ಅಥ್ಲೀಟ್. 1958ರಲ್ಲಿ ಮಿಲ್ಖಾ ಸಿಂಗ್ ಮತ್ತು 2014ರಲ್ಲಿ ವಿಕಾಸ್ ಗೌಡ ಚಿನ್ನ ಪಡೆದಿದ್ದರು.
ಒಲಿಂಪಿಕ್ಸ್‌ನ ಟ್ರಾಕ್ ಆ್ಯಂಡ್ ಫೀಲ್ಡ್ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಚಿನ್ನ ಗೆಲ್ಲುವ ಕನಸು ಈಡೇರಿಲ್ಲ. 1960ರಲ್ಲಿ ರೋಮ್ ಒಲಿಂಪಿಕ್ಸ್‌ನ 400 ಮೀಟರ್ ಓಟದಲ್ಲಿ ಮಿಲ್ಖಾ ಸಿಂಗ್ 4ನೇ ಸ್ಥಾನ ಪಡೆದಿದ್ದರು. ಅದೇ ರೀತಿ 1984ರಲ್ಲಿ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನ 400 ಮೀಟರ್ ಹರ್ಡಲ್ಸ್‌ನಲ್ಲಿ ಪಿ.ಟಿ.ಉಷಾ 4ನೇ ಸ್ಥಾನ ಗಳಿಸಿರುವುದು ಈ ವರೆಗಿನ ದೊಡ್ಡ ಸಾಧನೆಯಾಗಿದೆ.
ಮಿಲ್ಕಾ ಸಿಂಗ್‌ಗೆ ಪದಕ ಕೈ ತಪ್ಪಿ 24 ವರ್ಷಗಳ ಬಳಿಕ ಉಷಾ ಪದಕದ ಭರವಸೆ ಮೂಡಿಸಿದ್ದರೂ, ಅವರಿಗೂ ಪದಕ ಜಯಿಸಲು ಸಾಧ್ಯವಾಗಲಿಲ್ಲ. ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಚೋಪ್ರಾ ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 86.47 ಮೀ. ಸಾಧನೆಯೊಂದಿಗೆ ಚಿನ್ನ ಪಡೆದಿದ್ದರು. ಚೋಪ್ರಾ ಹರ್ಯಾಣ ರಾಜ್ಯದವರು. ಹರ್ಯಾಣ ರಾಜ್ಯ ಹಲವು ಮಂದಿ ಅತ್ಯುತ್ತಮ ಕುಸ್ತಿಪಟುಗಳನ್ನು ಮತ್ತು ಕಬಡ್ಡಿ ಆಟಗಾರರನ್ನು ದೇಶಕ್ಕೆ ನೀಡಿದೆ. ಇದೀಗ ಜಾವೆಲಿನ್‌ನಲ್ಲಿ ಯುವ ಪ್ರತಿಭೆ ಚೋಪ್ರಾ ಮಿಂಚುತ್ತಿದ್ದಾರೆ. ಚೋಪ್ರಾ ವಿದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2018ರಲ್ಲಿ ಅವರು ದೋಹಾ ಡೈಮಂಡ್ ಲೀಗ್ , ಏಷ್ಯನ್ ಗೇಮ್ಸ್ ಸೇರಿದಂತೆ ಕೆಲವು ಕೂಟಗಳಲ್ಲಿ ಪದಕದ ಬೇಟೆ ನಡೆಸಲಿದ್ದಾರೆ.