×
Ad

ನ್ಯೂಝಿಲ್ಯಾಂಡ್ ಓಪನ್ ಟೂರ್ನಿ : ವರ್ಮಗೆ ಸೋಲು, ಪ್ರಣೀತ್ ಮುನ್ನಡೆ

Update: 2018-05-04 23:14 IST
ಸಾಯಿ ಪ್ರಣೀತ್

ಆಕ್ಲಂಡ್, ಮೇ 4: ನ್ಯೂಝಿಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬಿ.ಸಾಯಿ ಪ್ರಣೀತ್ ತಮ್ಮ ಅದ್ಭುತ ಪ್ರದರ್ಶನ ಮುಂದುವರಿಸಿ ಸೆಮಿಫೈನಲ್ ತಲುಪಿದ್ದಾರೆ. ಆದರೆ ಐದನೇ ಶ್ರೇಯಾಂಕದ ಆಟಗಾರ, ಭಾರತದ ಸಮೀರ್ ವರ್ಮ ಕ್ವಾರ್ಟಲ್ ಫೈನಲ್ ಹಂತದಲ್ಲೇ ಮುಗ್ಗರಿಸಿದ್ದಾರೆ.

ಪ್ರಣೀತ್ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಶ್ರೀಲಂಕಾದ ನಿಲುಕಾ ಕರುಣಾರತ್ನೆಯ ಸವಾಲನ್ನು 21-7, 21-9ರ ನೇರ ಸೆಟ್‌ಗಳ ಗೆಲುವಿನೊಂದಿಗೆ ಬದಿಗೊತ್ತಿ ಮುನ್ನಡೆದರು. ಪ್ರಣೀತ್ ಸೆಮಿಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಆಟಗಾರ, ಇಂಡೋನೇಷಿಯಾದ ಜೊತಾಥನ್ ಕ್ರಿಸ್ಟೀ ಎದುರು ಸೆಣಸಲಿದ್ದಾರೆ. ಆದರೆ ಸಮೀರ್ ವರ್ಮ ಟೂರ್ನಿಯ ಅಗ್ರಶ್ರೇಯಾಂಕಿತ ಆಟಗಾರ, ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಚೀನಾದ ಲಿನ್ ಡ್ಯಾನ್ ಎದುರು ಸೋಲುಂಡರು. ವರ್ಮ ಪ್ರಥಮ ಸೆಟ್‌ನಲ್ಲಿ ಹೋರಾಟ ನೀಡಿದರೂ ದ್ವಿತೀಯ ಸೆಟ್‌ನಲ್ಲಿ ಡ್ಯಾನ್ ಸುಲಭ ಗೆಲುವು ಪಡೆದರು. ಅಂತಿಮವಾಗಿ 21-19, 21-9ರಲ್ಲಿ ಪಂದ್ಯ ಗೆದ್ದ ಡ್ಯಾನ್ ಸೆಮಿಫೈನಲ್ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಅರ್ಹತಾ ಸುತ್ತಿನಿಂದ ಗೆದ್ದು ಬಂದಿರುವ ಕೊರಿಯಾದ ಕ್ವಾಂಗ್ ಹಿ ಹಿಯೊರ ಸವಾಲಿಗೆ ಡ್ಯಾನ್ ಉತ್ತರಿಸಬೇಕಿದೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಐದನೇ ಶ್ರೇಯಾಂಕಿತ ಭಾರತೀಯ ಜೋಡಿ ಮನು ಅಟ್ರಿ- ಬಿ.ಸುಮೀತ್ ರೆಡ್ಡಿ ಕೂಡಾ ಸೋತು ಹೊರಬಿದ್ದಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಭಾರತೀಯ ಜೋಡಿಯನ್ನು ನಾಲ್ಕನೇ ಶ್ರೇಯಾಂಕಿತ ಥಾಯ್‌ಲ್ಯಾಂಡ್‌ನ ಬೋದಿನ್ ಇಸಾರ - ನಿಪಿಟೋನ್ ಫುಂಗ್ವಪೆಟ್ 21-10, 21-15 ನೇರ ಸೆಟ್‌ಗಳಲ್ಲಿ ಸೋಲಿಸಿ ಸೆಮಿಫೈನಲ್‌ಗೆ ಮುನ್ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News