×
Ad

ಫ್ರೆಂಚ್ ಓಪನ್ ಟೆನಿಸ್ : ಅರ್ಹತಾ ಸುತ್ತಿನಲ್ಲಿ ಸೆಣಸಲಿರುವ ಅಂಕಿತಾ

Update: 2018-05-04 23:21 IST

ಅಹ್ಮದಾಬಾದ್, ಮೇ 4: ಈ ವರ್ಷ ನಡೆಯಲಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಅಂಕಿತಾ ರೈನಾಗೆ ಪಾಲ್ಗೊಳ್ಳುವ ಅವಕಾಶ ಇದೀಗ ಒದಗಿಬಂದಿದೆ.

 ಫ್ರೆಂಚ್ ಓಪನ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆಡುವ ಆಟಗಾರರ ಪಟ್ಟಿಯನ್ನು ವಿಶ್ವ ಟೆನಿಸ್ ಸಂಘಟನೆ ಬಿಡುಗಡೆ ಮಾಡಿದ್ದು, ಇದರಲ್ಲಿ ವಿಶ್ವದಲ್ಲಿ 193ನೇ ಶ್ರೇಯಾಂಕ ಪಡೆದಿರುವ ಅಂಕಿತಾ ಸ್ಥಾನ ಪಡೆದಿದ್ದಾರೆ. ತನ್ನ ಕನಸು ಇದೀಗ ನನಸಾಗಿದೆ. ಟೆನಿಸ್ ಆಟವಾಡಲು ಪ್ರಾರಂಭಿಸಿದ ದಿನದಿಂದಲೂ ಗ್ರಾಂಡ್‌ಸ್ಲಾಮ್ ಟೂರ್ನಿಯಲ್ಲಿ ಆಡಬೇಕೆಂಬುದು ತನ್ನ ಕನಸಾಗಿತ್ತು. ಸೆರೆನಾ ವಿಲಿಯಮ್ಸ್ ಹಾಗೂ ಮರಿಯಾ ಶರಫೋವಾ ಅವರ ಆಟದಿಂದ ಪ್ರಭಾವಿತಳಾಗಿದ್ದೇನೆ ಎಂದು ಅಂಕಿತಾ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ವಾರ ಲುವಾನ್‌ನಲ್ಲಿ ನಡೆಯಲಿರುವ ಐಟಿಎಫ್ ಮಹಿಳಾ ಸರ್ಕ್ಯೂಟ್ ಟೂರ್ನಿಯಲ್ಲಿ ಅಂಕಿತಾ ಕಣಕ್ಕಿಳಿಯಲಿದ್ದಾರೆ. ಈ ವರ್ಷ ನಡೆದ ಐಟಿಎಫ್ ಹಾಗೂ ಸರ್ಕ್ಯೂಟ್ ಟೂರ್ನಿಯಲ್ಲಿ ನಿರಂತರವಾಗಿ ನೀಡಿದ ಸ್ಥಿರ ಪ್ರದರ್ಶನದಿಂದ ಅಂಕಿತಾಗೆ ಫ್ರೆಂಚ್ ಓಪನ್‌ನ ಅರ್ಹತಾ ಸುತ್ತಿನಲ್ಲಿ ಆಡುವ ಅವಕಾಶ ದೊರಕಿದೆ ಎಂದು ಅವರ ಕೋಚ್ ಹೇಮಂತ್ ಬೇಂದ್ರೆ ತಿಳಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ನಡೆದ ಡಬ್ಲೂಟಿಎ ಮುಂಬೈ ಓಪನ್ ಟೆನಿಸ್ ಟೂರ್ನಿಯಲ್ಲಿ ಅಂಕಿತಾ ಕ್ವಾರ್ಟರ್ ಫೈನಲ್ ತಲುಪಿದ್ದರು. ಈ ವರ್ಷದ ಆರಂಭದಲ್ಲಿ ದಿಲ್ಲಿಯಲ್ಲಿ ನಡೆದ ಫೆಡರೇಷನ್ ಕಪ್ ಪಂದ್ಯಾವಳಿಯಲ್ಲಿ ತನಗಿಂತ ಉನ್ನತ ಸ್ಥಾನದಲ್ಲಿರುವ ಇಬ್ಬರು ಆಟಗಾರರನ್ನು ಅಂಕಿತಾ ಸೋಲಿಸಿದ್ದಾರೆ. ಅಲ್ಲದೆ ಈ ವರ್ಷ ಗ್ವಾಲಿಯರ್‌ನಲ್ಲಿ ನಡೆದ ಐಟಿಎಫ್ ಟೂರ್ನಿಯಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಆದರೆ ಜಪಾನ್ ಮತ್ತು ಚೀನಾ ಸರ್ಕ್ಯೂಟ್ ಟೂರ್ನಿಯಲ್ಲಿ ಆಕೆ ಇನ್ನಷ್ಟು ಸುಧಾರಿತ ಪ್ರದರ್ಶನ ತೋರಬೇಕಿತ್ತು ಎಂದು ಕೋಚ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News