ಪ್ರಥಮ ದರ್ಜೆ ಕ್ರಿಕೆಟ್‌ನಿಂದ ಜೋನಾಥನ್ ಟ್ರಾಟ್ ನಿವೃತ್ತಿ
ಲಂಡನ್, ಮೇ 4: ಇಂಗ್ಲೆಂಡ್‌ನ ಮಾಜಿ ದಾಂಡಿಗ ಜೋನಾಥನ್ ಟ್ರಾಟ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
2009 ರಿಂದ 2013ರ ತನಕ ಇಂಗ್ಲೆಂಡ್ ತಂಡದ ಯಶಸ್ವಿ ಪ್ರದರ್ಶನದಲ್ಲಿ ಪ್ರಮುಖ ಪಾತ್ರವಹಿಸಿದ್ದ ಟ್ರಾಟ್ ಒಂದು ಬಾರಿ ವಿಶ್ವದ ನಂ.1 ಆಟಗಾರನಾಗಿದ್ದರು.
ಟ್ರಾಟ್ 2015ರ ಮೇನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಆದರೆ, ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುವುದನ್ನು ಮುಂದುವರಿಸಿದ್ದರು. ಈ ಋತುವಿನ ಅಂತ್ಯದಲ್ಲಿ ವಾವ್ರಿಂಕ್‌ಶೈರ್ ಪರ ಕೊನೆಯ ಪಂದ್ಯ ಆಡಲಿದ್ದೇನೆ ಎಂದು 2011ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದಿರುವ ಟ್ರಾಟ್ ಘೋಷಿಸಿದ್ದಾರೆ.
ವಾವ್ರಿಂಕ್‌ಶೈರ್ ಪರ ಆಡಿರುವ ಚೊಚ್ಚಲ ಪಂದ್ಯದಲ್ಲಿ 245 ರನ್ ಗಳಿಸಿದ್ದ ಟ್ರಾಟ್ 2009ರಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಿದ್ದ ಚೊಚ್ಚಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 119 ರನ್ ಗಳಿಸಿದ್ದರು. 2009ರ ಆ್ಯಶಸ್ ಸರಣಿಯಲ್ಲಿ ಗಮನ ಸೆಳೆದ ಟ್ರಾಟ್ 2010-11ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ 5 ಪಂದ್ಯಗಳಲ್ಲಿ 89ರ ಸರಾಸರಿಯಲ್ಲಿ ಒಟ್ಟು 445 ರನ್ ಗಳಿಸಿ ಮೂರನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. 28 ವರ್ಷಗಳ ಬಳಿಕ ಇಂಗ್ಲೆಂಡ್ ತಂಡ ಆಸ್ಟ್ರೇಲಿಯದಲ್ಲಿ ಆ್ಯಶಸ್ ಪಂದ್ಯ ಗೆಲ್ಲಲು ನೆರವಾಗಿದ್ದರು.
ಕೇಪ್‌ಟೌನ್ ಸಂಜಾತ ಟ್ರಾಟ್ 2009 ರಿಂದ 2015ರ ತನಕ ಇಂಗ್ಲೆಂಡ್ ಪರ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದು 44.08ರ ಸರಾಸರಿಯಲ್ಲಿ 9 ಶತಕ ಹಾಗೂ 19 ಅರ್ಧಶತಕಗಳ ಸಹಿತ 3,835 ರನ್ ಗಳಿಸಿದ್ದಾರೆ. 68 ಏಕದಿನ ಪಂದ್ಯಗಳಲ್ಲಿ 4 ಶತಕ ಹಾಗೂ 22 ಅರ್ಧಶತಕಗಳ ಸಹಿತ 2,819 ರನ್ ಕಲೆ ಹಾಕಿದ್ದರು.