ಡಮಾಸ್ಕಸ್ ಹೊರವಲಯದ ಪಟ್ಟಣಗಳನ್ನು ತೊರೆಯುತ್ತಿರುವ ಬಂಡುಕೋರರು

Update: 2018-05-11 16:28 GMT
ಸಾಂದರ್ಭಿಕ ಚಿತ್ರ

ಬೈರೂತ್, ಮೇ 11: ಸಿರಿಯ ರಾಜಧಾನಿ ಡಮಾಸ್ಕಸ್‌ನ ದಕ್ಷಿಣದ ಪ್ರದೇಶವನ್ನು ನೂರಾರು ಬಂಡುಕೋರರು ಗುರುವಾರ ತೊರೆದಿದ್ದಾರೆ ಎಂದು ವೀಕ್ಷಕರು ಮತ್ತು ಸರಕಾರಿ ಮಾಧ್ಯಮ ವರದಿ ಮಾಡಿದೆ.

ಯಲ್ಡ, ಬಬಿಲ ಮತ್ತು ಬೈಟ್ ಸಾಹಮ್‌ನ ಬಂಡುಕೋರರು ಮತ್ತು ಅವರ ಕುಟುಂಬ ಸದಸ್ಯರ ಕೊನೆಯ ತಂಡ ಗುರುವಾರ ಹೊರ ಹೊರಟಿತು. ಇದರೊಂದಿಗೆ ಒಂದು ವಾರದಿಂದ ಈ ಮೂರು ಪಟ್ಟಣಗಳಲ್ಲಿ ನಡೆಯುತ್ತಿದ್ದ ತೆರವು ಕಾರ್ಯ ಕೊನೆಗೊಂಡಿದೆ.

ನೂರಾರು ಬಂಡುಕೋರರು ಮತ್ತು ಅವರ ಕುಟುಂಬ ಸದಸ್ಯರನ್ನು ಹೊತ್ತ 15 ಬಸ್‌ಗಳು ಪಟ್ಟಣಗಳಿಂದ ಹೊರಟಿವೆ ಹಾಗೂ ಉತ್ತರ ಸಿರಿಯದಲ್ಲಿರುವ ಪ್ರತಿಪಕ್ಷ ನಿಯಂತ್ರಣದ ಸ್ಥಳವೊಂದಕ್ಕೆ ತೆರಳುತ್ತಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ.

‘‘2011ರ ಬಳಿಕ ಮೊದಲ ಬಾರಿಗೆ, ಡಮಾಸ್ಕಸ್ ಮತ್ತು ಅದರ ಸುತ್ತಮುತ್ತಲಿನ ಪಟ್ಟಣಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಹೊರತುಪಡಿಸಿ ಯಾವುದೇ ಪ್ರತಿಪಕ್ಷ ಹೋರಾಟಗಾರರಿಲ್ಲ’’ ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ವೀಕ್ಷಣಾಲಯದ ನಿರ್ದೇಶಕ ರಮಿ ಅಬ್ದುಲ್ ರಹಮಾನ್ ತಿಳಿಸಿದರು.

ಯಲ್ಡ, ಬಬಲಿ ಮತ್ತು ಬೈಟ್ ಸಾಹಮ್ ಪಟ್ಟಣಗಳ ಬಂಡುಕೋರರೊಂದಿಗೆ ಕಳೆದ ವಾರ ಸಿರಿಯ ಆಡಳಿತ ಒಪ್ಪಂದ ಮಾಡಿಕೊಂಡಿತ್ತು. ಇದೇ ಮಾದರಿಯನ್ನು ಅನುಸರಿಸಿ ಸಿರಿಯ ಸರಕಾರ ಇತ್ತೀಚಿನ ತಿಂಗಳುಗಳಲ್ಲಿ ಡಮಾಸ್ಕಸ್ ಸುತ್ತಲಿನ ಬಂಡುಕೋರ ನಿಯಂತ್ರಣ ಹಲವಾರು ಭೂಭಾಗಗಳನ್ನು ಮರುವಶಪಡಿಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News