ಜನಕಪುರ ಅಭಿವೃದ್ಧಿಗೆ 100 ಕೋಟಿ: ನೇಪಾಳದಲ್ಲಿ ಪ್ರಧಾನಿ ಮೋದಿ ಘೋಷಣೆ
ಕಠ್ಮಂಡು, ಮೇ 11: ನೇಪಾಳದ ಪವಿತ್ರ ನಗರ ಜನಕಪುರವನ್ನು ಅಭಿವೃದ್ಧಿಪಡಿಸಲು 100 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ ಹಾಗೂ ಭಾರತದ ‘ನೆರೆಕರೆ ಮೊದಲು’ ನೀತಿಯಲ್ಲಿ ನೇಪಾಳ ಅಗ್ರಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ, ನೇಪಾಳಕ್ಕೆ ಮೂರನೇ ಬಾರಿಗೆ ಭೇಟಿ ನೀಡಿರುವ ಮೋದಿ, ಹಿಂದೂಗಳ ಎರಡು ಪವಿತ್ರ ನಗರಗಳಾದ ಜನಕಪುರ ಮತ್ತು ಅಯೋಧ್ಯೆ ನಡುವಿನ ನೇರ ಬಸ್ ಸಂಪರ್ಕಕ್ಕೂ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ಹಾಜರಿದ್ದರು.
ಈ ಬಸ್ ಸೇವೆಯು ನೇಪಾಳ ಮತ್ತು ಭಾರತದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ‘ರಾಮಾಯಣ ಸರ್ಕೀಟ್’ನ ಒಂದು ಭಾಗವಾಗಿದೆ.
‘‘ಸಮಸ್ಯೆ ಬಂದಾಗಲೆಲ್ಲ ಭಾರತ ಮತ್ತು ನೇಪಾಳಗಳು ಜೊತೆಯಾಗಿ ನಿಂತಿವೆ. ನಮ್ಮ ಅತ್ಯಂತ ಕಠಿಣ ಸಮಯಗಳಲ್ಲಿ ನಾವು ಪರಸ್ಪರ ಜೊತೆಯಾಗಿ ನಿಂತಿದ್ದೇವೆ’’ ಎಂದು ಮೋದಿ ಹೇಳಿದರು.
ಅವರು ಜನಕಪುರ ಸಬ್ ಮೆಟ್ರೊಪಾಲಿಟನ್ ನಗರವು ಬರ್ಹಬೀಘ ಮೈದಾನದಲ್ಲಿ ಏರ್ಪಡಿಸಿದ ನಾಗರಿಕ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
100 ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಪ್ರಧಾನಿ, ನೇಪಾಳದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಭಿವೃದ್ಧಿ ಯೋಜನೆಗಳನ್ನು ಆರಿಸುತ್ತವೆ ಹಾಗೂ ಅವುಗಳನ್ನು ಜಾರಿಗೊಳಿಸುತ್ತವೆ ಎಂದರು.
ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಸಾಧಿಸಲು ಸಂಪ್ರದಾಯ, ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಉಭಯ ದೇಶಗಳು ಜೊತೆಯಾಗಿ ಕೆಲಸ ಮಾಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಮಾಯಣ ಸ್ಮರಣೆ
ಶುಕ್ರವಾರ ಜನಕಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಪ್ರಸಿದ್ಧ ಜಾನಕಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು ಹಾಗೂ ಪುರಾಣ ಪುರುಷರಾದ ಮಿಥಿಲೆಯ ರಾಜ ಜನಕ ಮತ್ತು ಅಯೋಧ್ಯೆಯ ರಾಜ ದಶರಥರನ್ನು ಸ್ಮರಿಸಿದರು.
ಜನಕಪುರವು ರಾಮಾಯಣದ ಸೀತೆಯ ಹುಟ್ಟಿದ ಸ್ಥಳವೆಂದು ಉಲ್ಲೇಖಗೊಂಡಿದೆ.