ದಕ್ಷಿಣ ಆಫ್ರಿಕ: ಮಸೀದಿಗೆ ನುಗ್ಗಿ ಇಮಾಮ್ ರನ್ನು ಇರಿದು ಕೊಂದ ದುಷ್ಕರ್ಮಿಗಳು
ವೆರುಲಮ್ (ದಕ್ಷಿಣ ಆಫ್ರಿಕ), ಮೇ 11: ದಕ್ಷಿಣ ಆಫ್ರಿಕದ ಡರ್ಬನ್ ನಗರದ ಹೊರವಲಯದ ವೆರುಲಮ್ ಪಟ್ಟಣದ ಮಸೀದಿಯೊಂದರ ಮೇಲೆ ಗುರುವಾರ ದಾಳಿ ನಡೆಸಿರುವ ದುಷ್ಕರ್ಮಿಗಳು, ಇಮಾಮರನ್ನು ಇರಿದು ಕೊಂದಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಮಧ್ಯಾಹ್ನದ ಪ್ರಾರ್ಥನೆ ಬಳಿಕ ಮೂವರು ದುಷ್ಕರ್ಮಿಗಳು ಬಂದೂಕುಗಳೊಂದಿಗೆ ವಿಶಾಲ ಮಸೀದಿಯನ್ನು ಪ್ರವೇಶಿಸಿದರು. ಎದುರಿಗೆ ಸಿಕ್ಕವರನ್ನು ಚೂರಿಯಿಂದ ಇರಿಯುತ್ತಾ ಸಾಗಿದ ಅವರು ಪೆಟ್ರೋಲ್ ಬಾಂಬೊಂದನ್ನು ಸಿಡಿಸಿದರು. ಇದರಿಂದಾಗಿ ಮಸೀದಿ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತು.
ದಾಳಿಯ ಬಳಿಕ ದುಷ್ಕರ್ಮಿಗಳು ಪಲಾಯನಗೈದಿದ್ದಾರೆ.
‘‘ದಾಳಿಯ ಉದ್ದೇಶ ಈ ಹಂತದಲ್ಲಿ ಗೊತ್ತಾಗಿಲ್ಲ. ಮೂರು ಹತ್ಯಾಯತ್ನಗಳು ಮತ್ತು ಬೆಂಕಿ ಹಚ್ಚುವಿಕೆ ಘಟನೆಯ ಬಗ್ಗೆ ವೆರುಲಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ’’ ಎಂದು ಪೊಲೀಸ್ ವಕ್ತಾರೆಯೊಬ್ಬರು ಹೇಳಿಕೆಯೊಂದರಲ್ಲಿ ತಿಳಿಸಿದರು.
ದಕ್ಷಿಣ ಆಫ್ರಿಕದಲ್ಲಿ ಇಂಥ ಘಟನೆ ಹಿಂದೆಂದೂ ನಡೆದಿರಲಿಲ್ಲ. ಇಲ್ಲಿ ಒಟ್ಟು ಜನಸಂಖ್ಯೆ 5.50 ಕೋಟಿ ಆಗಿದ್ದು, ಈ ಪೈಕಿ 1.5 ಶೇಕಡ ಮುಸ್ಲಿಮ್ ಆಗಿದ್ದಾರೆ.
ದಾಳಿ ನಡೆದಾಗ ಮಸೀದಿಯಲ್ಲಿ ಇಮಾಮ್ ಸೇರಿದಂತೆ ಮೂವರಿದ್ದರು.