ಐಪಿಎಲ್ ಶೈಲಿಯ ಮಹಿಳಾ ಟ್ವೆಂಟಿ-20ಗೆ ಸಿದ್ಧತೆ?

Update: 2018-05-13 04:22 GMT

ಮುಂಬೈ, ಮೇ 12: ಮುಂಬೈ ಮೇ 22 ರಂದು ನಡೆಯಲಿರುವ ಐಪಿಎಲ್ ಪ್ಲೇ-ಆಫ್ ಪಂದ್ಯಕ್ಕಿಂತ ಮೊದಲು ಮಹಿಳಾ ಟ್ವೆಂಟಿ-20 ಪ್ರದರ್ಶನ ಪಂದ್ಯ ನಡೆಸಲು ಬಿಸಿಸಿಐ ಉದ್ದೇಶಿಸಿದೆ. ಇದರಲ್ಲಿ ಭಾರತದ ಹಾಗೂ ವಿದೇಶದ ಆಟಗಾರ್ತಿಯರು ಭಾಗವಹಿಸಲಿದ್ದಾರೆ.

ಏಕೈಕ ಟ್ವೆಂಟಿ-20 ಪಂದ್ಯಕ್ಕಿಂತ ಮೊದಲು ಒಟ್ಟು 30 ಆಟಗಾರ್ತಿಯರು(20 ಭಾರತೀಯರು, 10 ವಿದೇಶೀಯರು)ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯದಲ್ಲಿ ತರಬೇತಿ ನಡೆಸಲಿದ್ದಾರೆ.

ಐಪಿಎಲ್ ಇಲೆವೆನ್ ಹಾಗೂ ಬಿಸಿಸಿಐ ಇಲೆವೆನ್ ನಡುವೆ ಟ್ವೆಂಟಿ-20 ಪಂದ್ಯ ನಡೆಯಲಿದ್ದು, ಸ್ಥಳೀಯ ಕಾಲಮಾನ ಮಧ್ಯಾಹ್ನ 2:30ರಿಂದ ಪಂದ್ಯವು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವಾಗಲಿದೆ.

ಕಳೆದ ವರ್ಷ ನಡೆದ ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ತಂಡ ಫೈನಲ್‌ಗೆ ತಲುಪಿದ ಹಿನ್ನೆಲೆಯಲ್ಲಿ ಐಪಿಎಲ್ ಆಡಳಿತ ಮಂಡಳಿಯು ಮಹಿಳಾ ಐಪಿಎಲ್ ನಡೆಸುವ ಬಗ್ಗೆ ಇತ್ತೀಚೆಗೆ ಚಿಂತನೆ ನಡೆಸಿತ್ತು.

ಐಪಿಎಲ್‌ನಂತೆಯೇ ಭಾರತ ಏಳು ಹಾಗೂ ವಿದೇಶದ ನಾಲ್ಕು ಆಟಗಾರ್ತಿಯರು ಅಂತಿಮ 11ರಲ್ಲಿ ಭಾಗವಹಿಸಲಿದ್ದಾರೆ.

ಎಲ್ಲ ವಿದೇಶಿ ಆಟಗಾರ್ತಿಯರಿಗೆ ಪಂದ್ಯ ಶುಲ್ಕ ಹಾಗೂ ದಿನಭತ್ತೆಯ ಜೊತೆಗೆ ಬ್ಯುಸಿನೆಸ್ ಕ್ಲಾಸ್ ರಿಟರ್ನ್ ಟಿಕೆಟ್‌ನ್ನು ನೀಡಲಾಗುತ್ತದೆ.

‘‘ಮಹಿಳಾ ಕ್ರಿಕೆಟ್ ಉತ್ತೇಜನಕ್ಕೆ ಇದು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಈ ಪ್ರಯೋಗ ಮುಂಬರುವ ಮಹಿಳಾ ಐಪಿಎಲ್ ಟೂರ್ನಿಗೆ ಸಹಾಯಕವಾಗುವ ವಿಶ್ವಾಸ ನನಗಿದೆ’’ ಎಂದು ಭಾರತದ ಮಾಜಿ ನಾಯಕಿ ಹಾಗೂ ಸಿಒಎ ಸದಸ್ಯೆ ಡಿಯಾನಾ ಎಡುಲ್ಜಿ ಹೇಳಿದ್ದಾರೆ. ಬಿಸಿಸಿಐ ಈಗಾಗಲೇ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳನ್ನು ಭೇಟಿಯಾಗಿದ್ದು, ವಿದೇಶಿ ಆಟಗಾರ್ತಿಯರ ಹೆಸರನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ.

ಭಾರತದ ಮಹಿಳಾ ಆಯ್ಕೆ ಸಮಿತಿಯು ಈ ವಾರಾಂತ್ಯಕ್ಕೆ ಆಟಗಾರ್ತಿಯರ ಹೆಸರುಗಳನ್ನು ಘೋಷಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News