ಇಂಡೋನೇಶ್ಯ: 3 ಚರ್ಚ್‌ಗಳಲ್ಲಿ ಆತ್ಮಹತ್ಯಾ ದಾಳಿ

Update: 2018-05-13 16:48 GMT

ಜಕಾರ್ತ (ಇಂಡೋನೇಶ್ಯ), ಮೇ 13: ಇಂಡೋನೇಶ್ಯದ ಎರಡನೆ ಅತಿ ದೊಡ್ಡ ನಗರ ಸುರಬಯದಲ್ಲಿರುವ ಮೂರು ಚರ್ಚ್‌ಗಳಲ್ಲಿ ರವಿವಾರ ಬೆಳಗ್ಗೆ ನಡೆದ ಆತ್ಮಹತ್ಯಾ ದಾಳಿಗಳಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಹಾಗೂ 40 ಮಂದಿ ಗಾಯಗೊಂಡಿದ್ದಾರೆ.

ಒಂದು ಚರ್ಚ್‌ನಲ್ಲಿ ಸ್ಫೋಟಗೊಳ್ಳದೆ ಉಳಿದಿದ್ದ ಬಾಂಬೊಂದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂರ್ವ ಜಾವಾ ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು. ದಾಳಿಗಳ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.

ಆದರೆ, ಐಸಿಸ್ ಭಯೋತ್ಪಾದಕ ಗುಂಪಿನಿಂದ ಪ್ರೇರಣೆ ಪಡೆದಿರುವ ಜೆಮಾ ಅನ್ಶಾರುತ್ ದೌಲಾ (ಜೆಎಡಿ) ಈ ದಾಳಿಗಳ ಹಿಂದಿದೆ ಎಂದು ನಂಬಲಾಗಿದೆ.

ಕೆಲವೇ ದಿನಗಳ ಹಿಂದೆ ರಾಜಧಾನಿ ಜಕಾರ್ತದ ಹೊರವಲಯದಲ್ಲಿರುವ ಅತಿ ಭದ್ರತೆಯ ಜೈಲೊಂದರಲ್ಲಿ ನಡೆದ 36 ಗಂಟೆಗಳ ಹೋರಾಟದಲ್ಲಿ ಐಸಿಸ್ ಉಗ್ರ ಸಂಘಟನೆಗೆ ಸೇರಿದ ಕೈದಿಗಳು ಭಯೋತ್ಪಾದನೆ ನಿಗ್ರಹ ದಳದ 5 ಸದಸ್ಯರನ್ನು ಹತ್ಯೆಗೈದಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News