2 ವಾರದಲ್ಲಿ ಪರಮಾಣು ಪರೀಕ್ಷಾ ಸ್ಥಾವರಗಳ ನಾಶ: ಉತ್ತರ ಕೊರಿಯ ಘೋಷಣೆ
ಸಿಯೋಲ್, ಮೇ 13: ಇನ್ನು 2 ವಾರಕ್ಕಿಂತಲೂ ಕಡಿಮೆ ಅವಧಿಯಲ್ಲಿ ತನ್ನ ಪರಮಾಣು ಪರೀಕ್ಷಾ ಸ್ಥಳವನ್ನು ನಾಶಪಡಿಸುವುದಾಗಿ ಉತ್ತರ ಕೊರಿಯ ಶನಿವಾರ ಹೇಳಿದೆ.
ಮುಂದಿನ ತಿಂಗಳು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ನಡುವೆ ನಡೆಯಲಿರುವ ಶೃಂಗ ಸಮ್ಮೇಳನಕ್ಕೂ ಮುನ್ನ ಈ ನಾಟಕೀಯ ಬೆಳವಣಿಗೆ ನಡೆದಿದೆ.
ದೇಶದ ಈಶಾನ್ಯ ಭಾಗದ ಪರೀಕ್ಷಾ ಸ್ಥಳದಲ್ಲಿರುವ ಎಲ್ಲ ಸುರಂಗಗಳನ್ನು ಸ್ಫೋಟಿಸಿ ನಾಶಗೊಳಿಸಲಾಗುವುದು ಹಾಗೂ ವೀಕ್ಷಣೆ ಮತ್ತು ಸಂಶೋಧನಾ ಘಟಕಗಳನ್ನೂ ಕೆಡವಲಾಗುವುದು ಎಂದು ಉತ್ತರ ಕೊರಿಯದ ವಿದೇಶ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಹೇಳಿಕೆಯನ್ನು ಆ ದೇಶದ ಸರಕಾರಿ ಸುದ್ದಿ ಸಂಸ್ಥೆ ಪ್ರಕಟಿಸಿದೆ.
ಕಳೆದ ತಿಂಗಳು ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ಜೊತೆ ನಡೆದ ಶೃಂಗ ಸಮ್ಮೇಳನದ ವೇಳೆ, ಪರಮಾಣು ಪರೀಕ್ಷಾ ಸ್ಥಾವರವನ್ನು ಮುಚ್ಚುವ ಇಂಗಿತವನ್ನು ಕಿಮ್ ಜಾಂಗ್ ಉನ್ ವ್ಯಕ್ತಪಡಿಸಿದ್ದರು.
‘‘ಪರಮಾಣು ಪರೀಕ್ಷಾ ಸ್ಥಾವರವನ್ನು ನಾಶಪಡಿಸುವ ಕಾರ್ಯಕ್ರಮವನ್ನು ಹವಾಮಾನವನ್ನು ಆಧರಿಸಿ ಮೇ 23 ಮತ್ತು 25ರ ನಡುವೆ ನಿಗದಿಪಡಿಸಲಾಗಿದೆ’’ ಎಂದು ವಿದೇಶ ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ಕಾರ್ಯಕ್ರಮಕ್ಕೆ ಅಮೆರಿಕ, ದಕ್ಷಿಣ ಕೊರಿಯ, ಚೀನಾ, ರಶ್ಯ ಮತ್ತು ಬ್ರಿಟನ್‌ಗಳ ಪತ್ರಕರ್ತರನ್ನು ಆಹ್ವಾನಿಸಲಾಗುವುದು ಎಂದು ಅದು ಹೇಳಿದೆ.
ಉದಾತ್ತ ನಡೆ: ಟ್ರಂಪ್
ಉತ್ತರ ಕೊರಿಯದ ಪ್ರಕಟನೆಗೆ ಶನಿವಾರ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತನ್ನ ಪರಮಾಣು ಪರೀಕ್ಷಾ ಸ್ಥಾವರವನ್ನು ಮುಚ್ಚುವ ನಿರ್ಧಾರಕ್ಕೆ ಉತ್ತರ ಕೊರಿಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
‘‘ಇದು ಅತ್ಯಂತ ಚಾಣಾಕ್ಷ ಹಾಗೂ ಉದಾತ್ತ ನಡೆ’’ ಎಂದು ಅವರು ಬಣ್ಣಿಸಿದ್ದಾರೆ.
ಪರಿಣತರನ್ನು ಕರೆಯುವ ಪ್ರಸ್ತಾಪವಿಲ್ಲ
ಕಳೆದ ತಿಂಗಳು ದಕ್ಷಿಣ ಮತ್ತು ಉತ್ತರ ಕೊರಿಯಗಳ ನಾಯಕರ ನಡುವೆ ಶೃಂಗ ಸಮ್ಮೇಳನ ನಡೆದ ಬಳಿಕ, ಪರಮಾಣು ಪರೀಕ್ಷಾ ಸ್ಥಾವರಗಳನ್ನು ನಾಶಪಡಿಸುವ ಪ್ರಕ್ರಿಯೆಯನ್ನು ವೀಕ್ಷಿಸಲು ಅಂತಾರಾಷ್ಟ್ರೀಯ ಪರಿಣತರಿಗೆ ಅವಕಾಶ ನೀಡಲು ಕಿಮ್ ಒಪ್ಪಿದ್ದಾರೆ ಎಂಬುದಾಗಿ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್‌ರ ಕಚೇರಿ ಹೇಳಿತ್ತು.
ಆದರೆ, ಉತ್ತರ ಕೊರಿಯವು ಶನಿವಾರ ನೀಡಿರುವ ಹೇಳಿಕೆಯಲ್ಲಿ, ಪರೀಕ್ಷಾ ಸ್ಥಾವರಕ್ಕೆ ಪರಿಣತರನ್ನು ಬಿಡುವ ಯಾವುದೇ ಪ್ರಸ್ತಾಪವಿಲ್ಲ. ಉತ್ತರ ಕೊರಿಯದ ಹೇಳಿಕೆಗೆ ದಕ್ಷಿಣ ಕೊರಿಯ ತಕ್ಷಣ ಪ್ರತಿಕ್ರಿಯಿಸಿಲ್ಲ.