ಇರಾಕ್: ಮತದಾನ ಪ್ರಮಾಣದಲ್ಲಿ ದಾಖಲೆಯ ಕುಸಿತ
Update: 2018-05-13 23:08 IST
ಬಗ್ದಾದ್, ಮೇ 13: ಇರಾಕ್‌ನಲ್ಲಿ ಐಸಿಸ್ ಪತನದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಶನಿವಾರ ದಾಖಲೆಯ ಕಡಿಮೆ ಪ್ರಮಾಣದ ಮತದಾನವಾಗಿದೆ. ಪ್ರಧಾನಿ ಹೈದರ್ ಅಲ್-ಅಬಾದಿ ಬಗ್ಗೆ ಜನರಲ್ಲಿ ವ್ಯಾಪಕ ಅಸಮಾಧಾನವೂ ವ್ಯಕ್ತವಾಗಿದೆ.
ಯಾವುದೇ ಮತಗಟ್ಟೆಯಲ್ಲಿ ಬಾಂಬ್ ಸ್ಫೋಟವಾಗದಿರುವುದು ಈ ಬಾರಿಯ ಗಣನೀಯ ಸಾಧನೆಯಾಗಿದೆ. 2003ರಲ್ಲಿ ಅಮೆರಿಕವು ಇರಾಕ್ ಮೇಲೆ ನಡೆಸಿದ ದಾಳಿಯ ಬಳಿಕ ಇಷ್ಟೊಂದು ಶಾಂತಿಯುತವಾಗಿ ಚುನಾವಣೆ ನಡೆದಿರುವುದು ಇದೇ ಮೊದಲ ಬಾರಿಯಾಗಿದೆ.
‘‘ಇದೊಂದು ಐತಿಹಾಸಿಕ ದಿನ. ಎಲ್ಲ ಇರಾಕಿಗಳು ಶಾಂತಿಯಿಂದ ಮತ ಚಲಾಯಿಸಿದ ದಿನ’’ ಎಂಬುದಾಗಿ ಪ್ರಧಾನಿ ಅಬಾದಿ ಬಣ್ಣಿಸಿದ್ದಾರೆ. ದೇಶದಲ್ಲಿ 44 ಶೇಕಡ ಮತದಾನವಾಗಿದೆ ಎಂದು ಇರಾಕ್‌ನ ರಾಷ್ಟ್ರೀಯ ಚುನಾವಣಾ ಆಯೋಗದ ಸದಸ್ಯ ರಿಯಾದ್ ಅಲ್-ಬದ್ರನ್ ಹೇಳಿದ್ದಾರೆ.
ಆದರೆ, 2003ರ ಬಳಿಕ ನಡೆದ ಯಾವುದೇ ಚುನಾವಣೆಯಲ್ಲಿ 60 ಶೇಕಡಕ್ಕಿಂತ ಕಡಿಮೆ ಮತದಾನವಾಗಿಲ್ಲ. ಒಂದು ಕೋಟಿಗೂ ಅಧಿಕ ಇರಾಕಿಗಳು ಶನಿವಾರ ಮತ ಚಲಾಯಿಸಿದ್ದಾರೆ.