ಇಂದು ಪಂಜಾಬ್ ವಿರುದ್ಧ ಮುಂಬೈಗೆ ಮಾಡು-ಮಡಿ ಪಂದ್ಯ

Update: 2018-05-15 18:36 GMT

ಹೊಸದಿಲ್ಲಿ, ಮೇ 15: ಈ ವರ್ಷದ ಐಪಿಎಲ್ ಟೂರ್ನಿಯು ತುಂಬಾ ಸ್ಪರ್ಧಾತ್ಮಕವಾಗಿದ್ದು ಎಲ್ಲ ತಂಡಗಳು ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿವೆ. ಇಲ್ಲಿ ತಪ್ಪು ಮಾಡಲು ಯಾವುದೇ ಅವಕಾಶವಿಲ್ಲ. ಸಣ್ಣ ತಪ್ಪು ಕೂಡ ದುಬಾರಿಯಾಗಬಹುದು. ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಸಾಕಷ್ಟು ಪಾಠ ಕಲಿತಿವೆ.

ಟೂರ್ನಿಯ ಅಂತ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಖ್ಯಾತಿ ಪಡೆದಿರುವ ಮುಂಬೈ ತಂಡ ಬುಧವಾರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ. ಮುಂಬೈನ ಪ್ಲೇ-ಆಫ್ ತೇರ್ಗಡೆಯಾಗುವ ಅವಕಾಶ ಅತಂತ್ರವಾಗಿದೆ. ಪಂಜಾಬ್ ತಂಡ ಪ್ಲೇ-ಆಫ್‌ಗೆ ತೇರ್ಗಡೆಯಾಗಲು ಹೋರಾಟ ನಡೆಸುತ್ತಿದೆ. ಇನ್ನು ಎರಡು ಪಂದ್ಯಗಳನ್ನು ಆಡಲಿರುವ ಮುಂಬೈ 12 ಪಂದ್ಯಗಳಲ್ಲಿ ಒಟ್ಟು 10 ಅಂಕ ಗಳಿಸಿದೆ. ಪಂಜಾಬ್ ತಂಡ 12 ಪಂದ್ಯಗಳಲ್ಲಿ 12 ಅಂಕ ಗಳಿಸಿದೆ.

ಮುಂಬೈ ತಂಡ ಬುಧವಾರದ ಪಂದ್ಯದಲ್ಲಿ ಸೋತರೆ ಟೂರ್ನಿಯಲ್ಲಿ ಅದರ ಹೋರಾಟ ಕೊನೆಗೊಳ್ಳುತ್ತದೆ. ಮುಂಬೈ ತಂಡ ಮೊದಲ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದೆ. ಎಲ್ಲ ನಾಲ್ಕೂ ಪಂದ್ಯಗಳನ್ನು ಕೊನೆಯ ಓವರ್‌ನಲ್ಲಿ ಸೋತಿತ್ತು. ಮತ್ತೊಂದೆಡೆ, ಪಂಜಾಬ್ ತಂಡ ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಕಳೆದ ಆರು ಪಂದ್ಯಗಳಲ್ಲಿ 5ರಲ್ಲಿ ಸೋತಿದ್ದು, ಮಧ್ಯಮ ಓವರ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ.

ಮುಂಬೈ ತಂಡ ಉಳಿದೆರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಒಟ್ಟು 14 ಅಂಕ ಗಳಿಸುತ್ತದೆ. ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಪ್ಲೇ-ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇನ್ನೆರಡು ಸ್ಥಾನಗಳು ಖಾಲಿ ಉಳಿದಿವೆ. ಈ ಎರಡು ಸ್ಥಾನಕ್ಕಾಗಿ ಐದು ತಂಡಗಳು ಸ್ಪರ್ಧೆಯಲ್ಲಿವೆ. ಮುಂಬೈ, ಪಂಜಾಬ್ ತಂಡವಲ್ಲದೆ, ಕೋಲ್ಕತಾ, ರಾಜಸ್ಥಾನ, ಬೆಂಗಳೂರು ತಂಡಗಳು ಅವಕಾಶಕ್ಕಾಗಿ ಕಾಯುತ್ತಿವೆ.

ರವಿವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಎವಿನ್ ಲೂವಿಸ್ ಮೊದಲ ವಿಕೆಟ್‌ಗೆ ವಿಕೆಟ್ ನಷ್ಟವಿಲ್ಲದೆ 87 ರನ್ ಗಳಿಸಿ ಉತ್ತಮ ಆರಂಭ ನೀಡಿದ್ದರು. ಟೂರ್ನಮೆಂಟ್‌ನಲ್ಲಿ ಉತ್ತಮ ಆರಂಭ ಪಡೆದಿದ್ದ ಮುಂಬೈ 168 ರನ್ ಗಳಿಸಿತ್ತು. ಆದರೆ, 7 ವಿಕೆಟ್‌ಗಳಿಂದ ಸೋಲುಂಡಿತ್ತು.

ಟೂರ್ನಮೆಂಟ್‌ನಲ್ಲಿ ಭರ್ಜರಿ ಆರಂಭ ಪಡೆದಿದ್ದ ಪಂಜಾಬ್ ತಂಡ ಟೂರ್ನಿಯ ಕೊನೆಯ ಹಂತದಲ್ಲಿ ತನ್ನ ಹಿಡಿತ ಕಳೆದುಕೊಂಡಿದೆ. ಪಂಜಾಬ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಹಾಟ್ ಫೇವರಿಟ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಮುಂಬೈ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಎದುರಿಸಲಿದೆ.

 ಕಳೆದ ಬಾರಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಪಂದ್ಯ ರೋಚಕವಾಗಿ ಕೊನೆಗೊಂಡಿತ್ತು. 16 ಎಸೆತಗಳಲ್ಲಿ 31 ರನ್ ಅಗತ್ಯವಿದ್ದಾಗ ಕೃನಾಲ್ ಪಾಂಡ್ಯ(31ರನ್, 12 ಎಸೆತ)ಪಂಜಾಬ್ ಕೈಯಿಂದ ಪಂದ್ಯವನ್ನು ಕಸಿದುಕೊಂಡರು. ಮುಂಬೈ ಆರು ವಿಕೆಟ್‌ಗಳಿಂದ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News