ಎರಡು ಸ್ಥಾನಕ್ಕಾಗಿ 5 ತಂಡಗಳ ಸ್ಪರ್ಧೆ

Update: 2018-05-15 18:39 GMT

ಹೊಸದಿಲ್ಲಿ, ಮೇ 15: ಸನ್‌ರೈಸರ್ಸ್ ಹೈದರಾಬಾದ್ ತಂಡ ಈಗಾಗಲೇ ಐಪಿಎಲ್‌ನಲ್ಲಿ ಪ್ಲೇ-ಆಫ್ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಈ ಸ್ಥಾನ ಪಡೆಯುವುದಕ್ಕೆ ಹತ್ತಿರವಾಗಿದೆ. ಉಳಿದೆರಡು ಸ್ಥಾನಕ್ಕಾಗಿ ಐದು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಮೂರು ತಂಡಗಳು ತಲಾ 12 ಅಂಕವನ್ನು ಗಳಿಸಿವೆ. ಇನ್ನೆರಡು ತಂಡಗಳಾದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ತಲಾ 10 ಅಂಕ ಗಳಿಸಿವೆ. ಹೀಗಾಗಿ ಪ್ಲೇ-ಆಫ್ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.

►ಕೋಲ್ಕತಾ ನೈಟ್ ರೈಡರ್ಸ್(12 ಪಂದ್ಯ, 6 ಗೆಲುವು, 6 ಸೋಲು, 12 ಅಂಕ):

  ಮುಂಬೈ ವಿರುದ್ಧ ಸತತ ಸೋಲಿನಿಂದ ಹೊರ ಬಂದಿರುವ ಕೋಲ್ಕತಾ ತಂಡ ಪಂಜಾಬ್ ವಿರುದ್ಧ ಈ ಋತುವಿನಲ್ಲಿ ಗರಿಷ್ಠ ಸ್ಕೋರ್(245/6) ಗಳಿಸುವ ಮೂಲಕ ಜಯಭೇರಿ ಬಾರಿಸಿದೆ. ಕೆಕೆಆರ್ ತಂಡ ಈಡನ್‌ಗಾರ್ಡನ್ಸ್‌ನಲ್ಲಿ ರಾಜಸ್ಥಾನ ವಿರುದ್ಧ ಆಡಲಿದ್ದು ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ 14 ಅಂಕ ಗಳಿಸಲಿದೆ. ಒಂದು ವೇಳೆ ಕೆಕೆಆರ್ ಜಯ ಸಾಧಿಸಿದರೆ ಪ್ಲೇ-ಆಫ್‌ಗೆ ಹತ್ತಿರವಾಗುತ್ತದೆ. ರಾಜಸ್ಥಾನಕ್ಕೆ ಸೋತರೆ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಕೆಕೆಆರ್ ನೆಟ್ ರನ್‌ರೇಟ್(-0.189)ಮುಂಬೈ(+0.405) ಹಾಗೂ ಆರ್‌ಸಿಬಿ(+0.218)ಗಿಂತ ದುರ್ಬಲವಾಗಿದೆ. ಮುಂದಿನಸುತ್ತಿಗೇರಬೇಕಾದರೆ ಕೆಕೆಆರ್ 14 ಅಂಕ ಗಳಿಸಬೇಕಾಗಿದೆ.

►ರಾಜಸ್ಥಾನ ರಾಯಲ್ಸ್(12 ಪಂದ್ಯ, 6 ಗೆಲುವು, 6 ಸೋಲು, 12 ಅಂಕ): ಒಂದು ವಾರದ ಹಿಂದೆ ಟೂರ್ನಿಯಲ್ಲಿ ಹೊರಬೀಳುವ ಭೀತಿಯಲ್ಲಿದ್ದ ರಾಜಸ್ಥಾನ ತಂಡ ಸತತ ಮೂರು ಪಂದ್ಯಗಳನ್ನು ಜಯಿಸುವ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಜೋಸ್ ಬಟ್ಲರ್ ಸತತ ಐದು ಅರ್ಧಶತಕಗಳನ್ನು ಸಿಡಿಸಿ ತಂಡವನ್ನು ಆಧರಿಸಿದ್ದಾರೆ. ಕೆಕೆಆರ್‌ನಂತೆಯೇ ಜೈಪುರ ಮೂಲದ ಫ್ರಾಂಚೈಸಿ ರಾಜಸ್ಥಾನ ತಂಡ ಉಳಿದೆರಡು ಪಂದ್ಯಗಳನ್ನು ಜಯಿಸಿ 16 ಅಂಕ ಗಳಿಸಬೇಕಾಗಿದೆ. ಮಂಗಳವಾರ ಕೆಕೆಆರ್ ವಿರುದ್ಧ ಜಯ ಸಾಧಿಸಿದರೆ ರಾಜಸ್ಥಾನ 14 ಅಂಕ ಗಳಿಸಲಿದೆ. ಒಂದು ವೇಳೆ ಸೋತರೆ ರಾಜಸ್ಥಾನಕ್ಕೆ ಹಿನ್ನಡೆಯಾಗಲಿದೆ.

►ಕಿಂಗ್ಸ್ ಇಲೆವೆನ್ ಪಂಜಾಬ್(12 ಪಂದ್ಯ, 6 ಗೆಲುವು, 6 ಸೋಲು, 12 ಅಂಕ): ಕ್ರಿಸ್ ಗೇಲ್ ಹಾಗೂ ಕೆಎಲ್ ರಾಹುಲ್ ಅವರ ಅಬ್ಬರದ ಬ್ಯಾಟಿಂಗ್, ಆ್ಯಂಡ್ರೂ ಟೈ ಹಾಗೂ ಮುಜೀಬ್ ವುರ್ ರಹ್ಮಾನ್ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಕೆಲವೇ ವಾರದ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ಲೇ-ಆಫ್ ಹಂತಕ್ಕೇರುವ ಫೇವರಿಟ್ ತಂಡವಾಗಿತ್ತು. ಆದರೆ, ಇದೀಗ ಆರು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿರುವ ಪಂಜಾಬ್ 12 ಅಂಕ ಗಳಿಸಿದೆ. ರಾಹುಲ್ ಹಾಗೂ ಗೇಲ್ ಅವರ ಅತಿಯಾದ ಆತ್ಮವಿಶ್ವಾಸ ಅವರಿಗೆ ಮುಳುವಾಗಿದೆ. ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 88 ರನ್‌ಗೆ ಆಲೌಟಾಗಿರುವ ಪಂಜಾಬ್ 10 ವಿಕೆಟ್‌ಗಳಿಂದ ಸೋತು ಭಾರೀ ಹಿನ್ನಡೆ ಕಂಡಿದೆ. ಪಂಜಾಬ್ ತಂಡ ಪ್ಲೇ-ಆಫ್‌ನಲ್ಲಿ ಸ್ಥಾನ ಗಿಟ್ಟಿಸಲು ಬುಧವಾರ ಮುಂಬೈ ವಿರುದ್ಧ ಹಾಗೂ ರವಿವಾರ ಚೆನ್ನೈ ವಿರುದ್ಧ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ನಿನ್ನೆ ನಡೆದ ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಸೋತ ಬಳಿಕ ಪಂಜಾಬ್ ನೆಟ್‌ರನ್‌ರೇಟ್ ಕುಸಿದಿದೆ.

►ಮುಂಬೈ ಇಂಡಿಯನ್ಸ್(12 ಪಂದ್ಯ, 5 ಗೆಲುವು, 7 ಸೋಲು, 10 ಅಂಕ): ರವಿವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಸೋತಿರುವ ಮುಂಬೈ ಇಂಡಿಯನ್ಸ್ ತಂಡ ಸ್ಪರ್ಧೆಯಲ್ಲಿರಬೇಕಾದರೆ ಉಳಿದ ಎರಡೂ ಪಂದ್ಯಗಳನ್ನು ಜಯಿಸಲೇಬೇಕಾಗಿದೆ. ಒಂದು ವೇಳೆ ಮುಂಬೈ ತಂಡ ಪಂಜಾಬ್ ಹಾಗೂ ಡೆಲ್ಲಿ ತಂಡವನ್ನು ಸೋಲಿಸಿದರೆ 14 ಅಂಕ ಗಳಿಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(ಪಂದ್ಯ 12, 5 ಗೆಲುವು,7 ಸೋಲು, 10 ಅಂಕ): ಆರ್‌ಸಿಬಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಎರಡು ಪಂದ್ಯಗಳಲ್ಲಿ ಭಾರೀ ಅಂತರದಿಂದ ಜಯ ಸಾಧಿಸಿರುವ ಆರ್‌ಸಿಬಿ ಪ್ಲೇ-ಆಫ್ ರೇಸ್‌ನಲ್ಲಿ ಉಳಿದಿದೆ. ಆರ್‌ಸಿಬಿ ಮುಂದಿನ ಸುತ್ತಿಗೇರಲು ಇನ್ನೆರಡು ಪಂದ್ಯಗಳನ್ನು ಜಯಿಸಬೇಕಾಗಿದೆ. ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದರೆ 14 ಅಂಕ ಲಭಿಸುತ್ತದೆ. ಪಂಜಾಬ್ ವಿರುದ್ಧ 10 ವಿಕೆಟ್‌ಗಳಿಂದ ಜಯ ಸಾಧಿಸಿರುವ ಆರ್‌ಸಿಬಿ ರನ್‌ರೇಟ್ 0.218ಕ್ಕೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News