ಎಲಿಮಿನೇಟರ್‌ನಲ್ಲಿ ಕೋಲ್ಕತಾ-ರಾಜಸ್ಥಾನ ಹಣಾಹಣಿ

Update: 2018-05-22 18:27 GMT

ಕೋಲ್ಕತಾ, ಮೇ 22: ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಬುಧವಾರ ನಡೆಯಲಿರುವ ಐಪಿಎಲ್ ಟ್ವೆಂಟಿ-20 ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡ ಮತ್ತು ರಾಜಸ್ಥಾನ ರಾಯಲ್ಸ್ ತಂಡ ಮುಖಾಮುಖಿಯಾಗಲಿವೆ.

ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ಮೂರನೇ ಸ್ಥಾನದೊಂದಿಗೆ ಮತ್ತು ಅಜಿಂಕ್ಯ ರಹಾನೆ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ನಾಲ್ಕನೇ ಸ್ಥಾನದೊಂದಿಗೆ ಎಲಿಮಿನೇಟರ್‌ನಲ್ಲಿ ಅವಕಾಶ ಪಡೆದಿವೆೆ.

ಗೆದ್ದ ತಂಡ ಕ್ವಾಲಿಫೈಯರ್-2ರಲ್ಲಿ ಮುಖಾಮುಖಿಯಾಗುವ ತಂಡವನ್ನು ಮಣಿಸಿದರೆ ಫೈನಲ್‌ಗೆ ಅವಕಾಶ ಪಡೆಯಲಿದೆ. ಕ್ವಾಲಿಫೈಯರ್-1ರಲ್ಲಿ ಸೋಲು ಅನುಭವಿಸುವ ತಂಡ ಕ್ವಾಲಿಫೈಯರ್-2ರಲ್ಲಿ ಎಲಿಮಿನೇಟರ್‌ನಲ್ಲಿ ಗೆಲ್ಲುವ ತಂಡವನ್ನು ಎದುರಿಸುವ ಅವಕಾಶ ಗಿಟ್ಟಿಸಿಕೊಳ್ಳಲಿದೆ.

ಮಾಜಿ ಚಾಂಪಿಯನ್‌ಗಳಾದ ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್‌ನಿಂದ ಸಮಬಲದ ಹೋರಾಟ ನಿರೀಕ್ಷಿಸಲಾಗಿದೆ. ಕೋಲ್ಕತಾ 6ನೇ ಬಾರಿ ಅಗ್ರ ನಾಲ್ಕರ ಲ್ಲಿ ಸ್ಥಾನ ಗಿಟ್ಟಿಸಿಕೊಂಡಿತ್ತು.

2008ರ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ತಂಡ ಮೇ 19ರಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಸೋಲಿಸಿ ಎಲಿಮಿನೇಟರ್‌ಗೆ ತೇರ್ಗಡೆಯಾಗಿತ್ತು. ತಂಡದ ಅಗ್ರ ಸರದಿಯ ದಾಂಡಿಗರಾದ ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ತವರಿನ ತಂಡದ ಕರ್ತವ್ಯ ನಿರ್ವಹಿಸಲು ರಾಜಸ್ಥಾನ ತಂಡವನ್ನು ತೊರೆದಿದ್ದರೂ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿಲ್ಲ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ತಂಡ ಎದುರಿಸಿದ ಕೊನೆಯ ಪಂದ್ಯಗಳಲ್ಲಿ ಸೋತು ಪ್ಲೇ ಆಫ್‌ನಲ್ಲಿ ಅವಕಾಶ ಪಡೆಯದೆ ನಿರ್ಗಮಿಸಿವೆ.

ರಾಜಸ್ಥಾನ ತಂಡದ ದಾಂಡಿಗರಿಗೆ ಸ್ಪಿನ್ನರ್‌ಗಳಾದ ಸುನೀಲ್ ನರೇನ್, ಪಿಯೂಷ್ ಚಾವ್ಲಾ ಮತ್ತು ಕುಲ್‌ದೀಪ್ ಯಾದವ್ ಸವಾಲು ಎದುರಾಗಲಿದೆ. ತಂಡದ ನಾಯಕ ರಹಾನೆ 324 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂಜು ಸ್ಯಾಮ್ಸನ್, ಆರಂಭಿಕ ದಾಂಡಿಗ ರಾಹುಲ್ ತ್ರಿಪಾಠಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.ದಕ್ಷಿಣ ಆಫ್ರಿಕದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸಿನ್ ತಂಡದ ಮ್ಯಾಚ್ ಫಿನಿಶರ್ ಆಗಿದ್ದಾರೆ.

  ಕೋಲ್ಕತಾ ತಂಡದ ನಾಯಕ ದಿನೇಶ್ ಕಾರ್ತಿಕ್ ತಂಡದ ಮ್ಯಾಚ್ ಫಿನಿಶರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರು 438 ರನ್‌ಗಳೊಂದಿಗೆ ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. ಆಲ್‌ರೌಂಡರ್ ಸುನೀಲ್ ನರೇನ್ ತಂಡದ ಯಶಸ್ಸಿನಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ಬೌಲರ್ ಪ್ರಸಿದ್ಧ್ ಕೃಷ್ಣ ಹೈದರಾಬಾದ್ ವಿರುದ್ಧ 30ಕ್ಕೆ 4 ವಿಕೆಟ್ ಉಡಾಯಿಸಿ ಮಿಂಚಿದ್ದರು.

ಪಂದ್ಯದ ಸಮಯ ರಾತ್ರಿ 7:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News