ಶುಕ್ರವಾರ 2ನೇ ಕ್ವಾಲಿಫೈಯರ್: ಕೋಲ್ಕತಾ-ಹೆದರಾಬಾದ್ ಹಣಾಹಣಿ

Update: 2018-05-24 18:13 GMT

ಕೋಲ್ಕತಾ, ಮೇ 24: ಎರಡು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ತವರು ಮೈದಾನ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಐಪಿಎಲ್‌ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸವಾಲು ಎದುರಿಸಲಿದೆ. ಇತ್ತೀಚೆಗೆ ಕಳಪೆ ಫಾರ್ಮ್‌ನಲ್ಲಿರುವ ಹೈದರಾಬಾದ್‌ಗೆ ಸೋಲುಣಿಸಿ ಫೈನಲ್‌ಗೆ ತಲುಪುವ ವಿಶ್ವಾಸದಲ್ಲಿದೆ.

  ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಮೇ 27 ರಂದು ಮುಂಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಸೋತ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ.

ಕೆಕೆಆರ್ ತಂಡ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 25 ರನ್‌ಗಳಿಂದ ಮಣಿಸುವ ಮೂಲಕ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿ ಕೊಂಡಿದೆ.

ಕೆಕೆಆರ್ ತಂಡ ತವರು ಮೈದಾನದ ಲಾಭವೆತ್ತಿ ಹೈದರಾಬಾದ್ ವಿರುದ್ಧ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಉಭಯ ತಂಡಗಳು ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆ ಇಡುವ ವಿಶ್ವಾಸದಲ್ಲಿವೆ.

ಕೋಲ್ಕತಾ ತಂಡ ಟೂರ್ನಿಯ ಕೊನೆಯಲ್ಲಿ ಗೆಲುವಿನ ಹಳಿಗೆ ಮರಳಿದ್ದು ಸತತ 4 ಪಂದ್ಯಗಳನ್ನು ಜಯಿಸಿತ್ತು. ಆದರೆ, ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹೈದರಾಬಾದ್ ಕೊನೆಯ ಹಂತದಲ್ಲಿ ಸತತ 4 ಪಂದ್ಯಗಳಲ್ಲಿ ಸೋಲುಂಡಿದೆ. ಇದು ಕೇನ್ ವಿಲಿಯಮ್ಸನ್ ನೇತೃತ್ವದ ಹೈದರಾಬಾದ್‌ಗೆ ತಲೆನೋವಿನ ವಿಷಯವಾಗಿದೆ.

ಟೂರ್ನ ಮೆಂಟ್‌ನಲ್ಲಿ ಶ್ರೇಷ್ಠ ಬೌಲಿಂಗ್ ವಿಭಾಗ ಹೊಂದಿ ರುವ ತಂಡ ಎನಿಸಿ ಕೊಂಡಿ ರುವ ಹೈದರಾಬಾದ್ ಪಾಳಯದಲ್ಲಿ ಭುವನೇಶ್ವರ ಕುಮಾರ್, ಸಿದ್ದಾ ರ್ಥ್ ಕೌಲ್ ಹಾಗೂ ಸಂದೀಪ್ ಶರ್ಮ ಅವರು ಯುವ ಪ್ರತಿಭಾವಂತ ಆಟಗಾರ ರಶೀದ್ ಖಾನ್‌ರೊಂದಿಗೆ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ತವರು ಮೈದಾನದಲ್ಲಿ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿದೆ. ಕೋಲ್ಕತಾವನ್ನು ಕಟ್ಟಿಹಾಕಲು ಹೈದರಾಬಾದ್ ತಂಡ ವಿಶೇಷ ಪ್ರಯತ್ನ ನಡೆಸಬೇಕಾದ ಅಗತ್ಯವಿದೆ. ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಟೂರ್ನಿಯಿಂದ ಹೊರಗಟ್ಟಿ ಪ್ಲೇ-ಆಫ್‌ಗೆ ತೇರ್ಗಡೆಯಾದ ಮೊದಲ ತಂಡ ಎನಿಸಿಕೊಂಡಿರುವ ಹೈದರಾಬಾದ್ ಪುಣೆಯಲ್ಲಿ ಚೆನ್ನೈ ವಿರುದ್ಧ 180 ರನ್ ಗಳಿಸಿದ್ದರೂ ಪಂದ್ಯ ಗೆಲ್ಲಲು ವಿಫಲವಾಗಿತ್ತು. ಆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತಾ ಹಾಗೂ ಚೆನ್ನೈ ವಿರುದ್ಧ ಸೋಲುಂಡಿತ್ತು. ಬ್ಯಾಟಿಂಗ್ ವಿಭಾಗ ಹೈದರಾಬಾದ್‌ಗೆ ಸಮಸ್ಯೆಯಾಗಿ ಪರಿಣಮಿಸಿದೆ. ತಂಡ ನಾಯಕ ವಿಲಿಯಮ್ಸನ್‌ರನ್ನು ಹೆಚ್ಚು ಅವಲಂಬಿಸಿದೆ. ಆರೆಂಜ್ ಕ್ಯಾಪ್ ಧರಿಸಿರುವ ವಿಲಿಯಮ್ಸನ್ 57.05ರ ಸರಾಸರಿಯಲ್ಲಿ ಒಟ್ಟು 685 ರನ್ ಗಳಿಸಿದ್ದಾರೆ.

  ಚೆನ್ನೈ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತಿರುವ ಹೈದರಾಬಾದ್ ತೀವ್ರ ಹಿನ್ನಡೆ ಅನುಭವಿಸಿದೆ. ಈ ಪಂದ್ಯದಲ್ಲಿ ಹೈದರಾಬಾದ್‌ಗೆ ಗೆಲ್ಲುವ ಉತ್ತಮ ಅವಕಾಶವಿತ್ತು. 140 ರನ್ ಗುರಿ ಪಡೆದಿದ್ದ ಚೆನ್ನೈ 18 ಓವರ್‌ಗಳಲ್ಲಿ 113 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡು ಸೋಲುವ ಭೀತಿಯಲ್ಲಿತ್ತು. ಕಾರ್ಲೊಸ್ ಬ್ರಾತ್‌ವೇಟ್‌ಗೆ ಡೆತ್ ಓವರ್‌ನಲ್ಲಿ ಬೌಲಿಂಗ್ ನೀಡಿರುವ ವಿಲಿಯಮ್ಸನ್ ನಿರ್ಧಾರ ಕೈಕೊಟ್ಟಿತು. ವೆಸ್ಟ್‌ಇಂಡೀಸ್‌ನ ಬ್ರಾತ್‌ವೇಟ್ 18ನೇ ಓವರ್‌ನಲ್ಲಿ 20 ರನ್ ಸೋರಿಕೆ ಮಾಡಿದ್ದರು. ಭುವನೇಶ್ವರ ಕುಮಾರ್(9 ವಿಕೆಟ್)ಸೆಮಿಫೈನಲ್ ಸ್ವರೂಪ ಪಡೆದಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್(18 ವಿಕೆಟ್)ಹಾಗೂ ಐಪಿಎಲ್‌ನ ಶ್ರೇಷ್ಠ ಬೌಲರ್ ಸಿದ್ದಾರ್ಥ್ ಕೌಲ್(19 ವಿಕೆಟ್) ತಂಡದ ಯಶಸ್ಸಿನಲ್ಲಿ ಕಾಣಿಕೆ ನೀಡುತ್ತಾ ಬಂದಿದ್ದಾರೆ.

ಚೆನ್ನೈ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿರುವ ಶಿಖರ್ ಧವನ್(437 ರನ್)ಶುಕ್ರವಾರದ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ನಿರೀಕ್ಷೆ ಯಲ್ಲಿದ್ದಾರೆ. ಆದರೆ, ಮಧ್ಯಮ ಕ್ರಮಾಂಕ ಸನ್‌ರೈಸರ್ಸ್‌ಗೆ ಸಮಸ್ಯೆ ತಂದೊಡ್ಡಿದೆ. ಮನೀಶ್ ಪಾಂಡೆ(284) ಹಾಗೂ ಯೂಸುಫ್ ಪಠಾಣ್(212)ಭಾರೀ ವೈಫಲ್ಯ ಕಂಡಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ತಂಡಕ್ಕೆ ಆಸರೆಯಾಲು ವಿಫಲ ವಾಗುತ್ತಿದ್ದಾರೆ.ಕೋಲ್ಕತಾಕ್ಕೆ ಇಂತಹ ಸಮಸ್ಯೆ ಗಳಿಲ್ಲ. ತಂಡದಲ್ಲಿ ಗಾಯಾಳು ಸಮಸ್ಯೆ ಯಿದ್ದರೂ ಹೆಚ್ಚಿನ ಬದಲಾವಣೆ ಮಾಡಿಲ್ಲ. ಅತ್ಯಂತ ಯಶಸ್ವಿ ನಾಯಕ ಗೌತಮ್ ಗಂಭೀರ್ ಡೆಲ್ಲಿ ತಂಡದ ಪಾಲಾದ ಕಾರಣ ಕೋಲ್ಕತಾ ತಂಡದ ನಾಯಕನಾಗಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದ ದಿನೇಶ್ ಕಾರ್ತಿಕ್ 15 ಪಂದ್ಯಗಳಲ್ಲಿ 54.44ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಕಳೆದ ರಾತ್ರಿ ಕೋಲ್ಕತಾದ ಆರಂಭಿಕ ಆಟಗಾರ ಸುನೀಲ್ ನರೇನ್ ಉತ್ತಮ ಆರಂಭ ನೀಡಲು ವಿಫಲರಾಗಿದ್ದರು. ಆದರೆ, ಆಲ್‌ರೌಂಡರ್ ಆ್ಯಂಡ್ರೆ ರಸ್ಸೆಲ್ 25 ಎಸೆತಗಳಲ್ಲಿ ಔಟಾಗದೆ 49 ರನ್ ಗಳಿಸಿದ್ದರು. ಈ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ನರೇನ್ ಬೌಲರ್ ಆಗಿ ಪರಿಣಾಮಕಾರಿ ಪ್ರದರ್ಶನ ನೀಡಿಲ್ಲ. ಅವಳಿ ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್(16 ವಿಕೆಟ್) ಹಾಗೂ ಪಿಯೂಷ್ ಚಾವ್ಲಾ(13 ವಿಕೆಟ್)ತಂಡದ ಬೌಲಿಂಗ್ ವಿಭಾಗಕ್ಕೆ ಬಲ ತುಂಬುತ್ತಿದ್ದಾರೆ. ಇವರಿಗೆ ರಸ್ಸೆಲ್ ಹಾಗೂ ಪ್ರಸಿದ್ಧ ಕೃಷ್ಣ ಸಾಥ್ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News